ರಂಬನ್‌ನಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, ಏಳು ಮಂದಿಗೆ ಗಾಯ
ಜಮ್ಮು, ಅ. 8: ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಟಾಟಾ ಸುಮೋ ವಾಹನ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಸೆನಾಬತಿ-ಚೌಂತನ್ ರಸ್ತೆಯಲ್ಲಿ ಒಂಬತ್ತು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಸುಮೋ ವಾಹನ ಅಪಘಾತಕ್ಕೀಡಾಗಿದೆ. ಗಾಯಗೊಂಡ ಎಲ್ಲರನ್ನು ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಉಖ್ರಾಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ರಂಬನ್ ಜಿಲ್ಲಾ ಆಸ್ಪತ್ರೆಗೆ ಹಾಗೂ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.
ಚಿಕಿತ್ಸೆ ವೇಳೆ ಉಖ್ರಾಲ್‌ನ PHCಯಲ್ಲಿ ಒಬ್ಬರು ಹಾಗೂ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು (GMC) ಆಸ್ಪತ್ರೆಯಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಘಟನೆ ಕುರಿತು ರಂಬನ್ ಜಿಲ್ಲಾಧಿಕಾರಿ ಮೊಹಮ್ಮದ್ ಅಲಿಯಾಸ್ ಖಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಅಪಘಾತದಲ್ಲಿ ಸೆನಾಬತಿ ಗ್ರಾಮದವರೇ ಆದ ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಗಾಯಗೊಂಡವರ ಪೈಕಿ ಆರು ಮಂದಿಯನ್ನು ಅನಂತನಾಗ್‌ನ GMC ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೌರಾ ಎಸ್‌ಕೆಐಎಂಎಸ್‌ಗೆ (SKIMS) ರವಾನಿಸಲಾಗಿದೆ. ರಂಬನ್ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಇಬ್ಬರನ್ನು GMC ಜಮ್ಮುವಿಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಒಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗಾಯಾಳುಗಳಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ನೆರವು ಮತ್ತು ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.