ಜನವರಿ 1ರಿಂದ ಬ್ಯಾಂಕ್ ಠೇವಣಿಗಳೂ ಏಕೀಕೃತ ಖಾತೆ ವಿವರದಲ್ಲಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 1ರಿಂದ ಸೆಬಿ (SEBI) ನಿಯಂತ್ರಿತ ಡೆಪಾಸಿಟರಿಗಳಿಗೆ, ನಾನ್-ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿ–ಅಕೌಂಟ್ ಅಗ್ರಿಗೇಟರ್ (NBFC-AA) ವ್ಯವಸ್ಥೆಯ ಮೂಲಕ ಬ್ಯಾಂಕ್ ಠೇವಣಿ ಖಾತೆಗಳ ಮಾಹಿತಿಯನ್ನು ಕನ್ಸಾಲಿಡೇಟೆಡ್ ಅಕೌಂಟ್ ಸ್ಟೇಟ್‌ಮೆಂಟ್ (CAS)ನಲ್ಲಿ ಸೇರಿಸಲು ಅನುಮತಿ ನೀಡಿದೆ.
ಪ್ರಸ್ತುತ CASನಲ್ಲಿ ಒಂದೇ ಶಾಶ್ವತ ಖಾತೆ ಸಂಖ್ಯೆ (PAN)ಗೆ ಸಂಬಂಧಿಸಿದ ಮ್ಯೂಚುವಲ್ ಫಂಡ್ ಹೂಡಿಕೆಗಳು ಹಾಗೂ ಡಿಮ್ಯಾಟ್ ಖಾತೆಯಲ್ಲಿರುವ ಷೇರು ಮತ್ತು ಇತರ ಭದ್ರತೆಗಳ ವಿವರಗಳು ಒಟ್ಟಾಗಿ ಲಭ್ಯವಾಗುತ್ತವೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)ಯಲ್ಲಿನ ನಿವೃತ್ತಿ ಉಳಿತಾಯದ ಮಾಹಿತಿಯೂ ಇದರಲ್ಲಿ ಸೇರಿಸಲಾಗಿದೆ. ಆದರೆ ಇದುವರೆಗೆ ಬ್ಯಾಂಕ್ ಠೇವಣಿಗಳ ವಿವರಗಳು CASನಲ್ಲಿ ಇರಲಿಲ್ಲ.
RBI ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಆರಂಭದಲ್ಲಿ ಅಕೌಂಟ್ ಅಗ್ರಿಗೇಟರ್ ವ್ಯವಸ್ಥೆಗೆ ಈಗಾಗಲೇ ಸೇರ್ಪಡೆಯಾಗಿರುವ ಬ್ಯಾಂಕ್‌ಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಇತರ ಬ್ಯಾಂಕ್‌ಗಳು ಹಂತ ಹಂತವಾಗಿ ಈ ವ್ಯವಸ್ಥೆಗೆ ಸೇರ್ಪಡೆಯಾಗಲಿವೆ ಎಂದು ತಿಳಿಸಿದ್ದಾರೆ.
“CAS ಮೂಲಕ ಗ್ರಾಹಕರು ತಮ್ಮ ಬ್ಯಾಂಕ್ ಠೇವಣಿಗಳು ಹಾಗೂ ಡಿಮ್ಯಾಟ್ ಖಾತೆಯಲ್ಲಿರುವ ಹೂಡಿಕೆಗಳ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯಲು ಸಾಧ್ಯವಾಗಲಿದೆ,” ಎಂದು RBI ತಿಳಿಸಿದೆ.
ಈ ಏಕೀಕೃತ ಮಾಹಿತಿ ವ್ಯವಸ್ಥೆಯು ಖಾತೆದಾರರ ಮರಣದಂತಹ ಸಂದರ್ಭಗಳಲ್ಲಿ ಪತ್ತೆಹಚ್ಚಲು ಕಷ್ಟವಾಗಬಹುದಾದ ಹಣಕಾಸು ಆಸ್ತಿಗಳನ್ನು ಗುರುತಿಸಲು ಖಾತೆದಾರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಹಾಯವಾಗಬಹುದು.
ಡೆಪಾಸಿಟರಿಗಳು ಪ್ರತೀ ತಿಂಗಳು ಹೂಡಿಕೆದಾರರ ನೋಂದಾಯಿತ ಇ-ಮೇಲ್ ವಿಳಾಸಕ್ಕೆ CAS ಕಳುಹಿಸುತ್ತವೆ. ಇದರಲ್ಲಿ ಷೇರುಗಳು ಮತ್ತು ಇತರ ಭದ್ರತೆಗಳು ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆಗಳ ವಿವರಗಳಿರುತ್ತವೆ. ಮ್ಯೂಚುವಲ್ ಫಂಡ್‌ಗಳಿಗೆ ಸಂಬಂಧಿಸಿದಂತೆ ಹೂಡಿಕೆಯ ಮೌಲ್ಯ, ಆದಾಯ, ವೆಚ್ಚಗಳು ಮತ್ತು ಕಮಿಷನ್‌ಗಳ ಮಾಹಿತಿಯೂ ಲಭ್ಯವಾಗಬಹುದು. ಸಂಬಂಧಿತ ಮಾಹಿತಿ ನ್ಯಾಷನಲ್ ಇನ್ಶೂರೆನ್ಸ್ ರೆಪೊಸಿಟರಿಯಲ್ಲಿ ಲಭ್ಯವಿದ್ದರೆ, ಇ-ವಿಮಾ ಖಾತೆಗಳ ವಿವರಗಳನ್ನೂ ಸೇರಿಸಬಹುದು.
ಬ್ಯಾಂಕ್ ಠೇವಣಿಗಳ ಸೇರ್ಪಡೆಯಿಂದ CAS ವ್ಯಕ್ತಿಯ ಒಟ್ಟು ಹಣಕಾಸು ಆಸ್ತಿಗಳ ಹೆಚ್ಚು ಸಮಗ್ರ ಚಿತ್ರಣ ನೀಡಲಿದೆ. ಇದರಿಂದ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹರಡಿರುವ ಆಸ್ತಿಗಳನ್ನು ಹೂಡಿಕೆದಾರರು ಮತ್ತು ಅವರ ಕುಟುಂಬದವರು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಲಿದೆ.
ಭಾರತದಲ್ಲಿ ಪ್ರಸ್ತುತ ಸೆಬಿ ನಿಯಂತ್ರಣದಲ್ಲಿರುವ ಎರಡು ಡೆಪಾಸಿಟರಿಗಳಿವೆ — ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (NSDL) ಮತ್ತು ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (CDSL). ಇವು ಹೂಡಿಕೆದಾರರ ಷೇರುಗಳು, ಬಾಂಡ್‌ಗಳು ಸೇರಿದಂತೆ ವಿವಿಧ ಭದ್ರತೆಗಳನ್ನು ಎಲೆಕ್ಟ್ರಾನಿಕ್ ಅಥವಾ ಡಿಮ್ಯಾಟ್ ರೂಪದಲ್ಲಿ ನಿರ್ವಹಿಸುತ್ತವೆ.
ಹೊಸ ಸೌಲಭ್ಯ ಜಾರಿಗೆ ಬಂದ ಬಳಿಕ, CAS ಕೇವಲ ಹೂಡಿಕೆಗಳ ವಿವರ ನೀಡುವ ಹೇಳಿಕೆಯಾಗಿರದೆ, ವ್ಯಕ್ತಿಯ ವಿವಿಧ ಹಣಕಾಸು ಆಸ್ತಿಗಳ ಸಮಗ್ರ ದಾಖಲೆಯಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ.