ಕಂಪ್ಲಿ

ಪತ್ರಿಕಾ ದಿನಾಚರಣೆ: ಜವಾಬ್ದಾರಿಯುತ ಪತ್ರಿಕೋದ್ಯಮದ ಮಹತ್ವಕ್ಕೆ ಒತ್ತು

ಪತ್ರಿಕಾ ದಿನಾಚರಣೆ: ಜವಾಬ್ದಾರಿಯುತ ಪತ್ರಿಕೋದ್ಯಮದ ಮಹತ್ವಕ್ಕೆ ಒತ್ತು

ಕಂಪ್ಲಿ 24: ಪಟ್ಟಣದ ಶ್ರೀ ವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕವು ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ನಡೆಯಿತು. ತಹಸೀಲ್ದಾರ್ ಜೂಗಲ ಮಂಜುನಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯಗಳಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ನಂತರದ ಪತ್ರಿಕೆಗಳ ಸ್ವರೂಪ ಬದಲಾಗಿದೆ. ಪತ್ರಿಕೆ ಕೇವಲ ಮಾಹಿತಿಕೊಡುವ ಮಾಧ್ಯಮ ಆಗಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಚ್ಚನ್ನು  ಪ್ರೇರೇಪಿಸಿ ದೇಶವಾಸಿಗಳನ್ನು ಒಟ್ಟುಗೂಡಿಸಲು ಪತ್ರಿಕೆ ಮಹತ್ವದ ಪಾತ್ರವಹಿಸಿತ್ತು. ಪತ್ರಿಕೆ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದ್ದು. ಸಾಮಾನ್ಯ ಜನರ ಪ್ರತಿಧ್ವನಿಯಾಗಿದೆ. ಕಂಪ್ಲಿ ಪಟ್ಟಣದ ಪತ್ರಕರ್ತರು ನಿಖರ ಮಾಹಿತಿ ಕೊಡುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಸುದ್ದಿ ಪ್ರಕಟಿಸುವ ಮೊದಲು ಸೂಕ್ತವಾಗಿ ಪರೀಶೀಲಿಸಿ ಪ್ರಕಟಿಸಲು ಪತ್ರಕರ್ತರು ಮುಂದಾಗಬೇಕು. ಪ್ರಚಲಿತ ವಿದ್ಯಮಾನ, ಜ್ಞಾನ ವೃದ್ಧಿಗೆ ಪತ್ರಿಕೆ ಸಹಕಾರಿಯಾಗಿವೆ. ಪತ್ರಿಕೆ ಮಾಹಿತಿ ನೀಡುವ ಪೇಪರ್ ಅಲ್ಲ ಸಮಾಜದ ಧ್ವನಿಯಾಗಿದೆ ಎಂದು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್‌.ವೀರಭದ್ರಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಪತ್ರಿಕೋಧ್ಯಮದ ಬೆಳವಣಿಗೆ ಮಂಗಳೂರು ಸಮಾಚಾರದಿಂದ ಬಳ್ಳಾರಿಯಿಂದಲೇ ಶುರುವಾಯಿತು. ಸೋಶಿಯಲ್ ಮೀಡಿಯಾದಲ್ಲಿನ ಎಲ್ಲ ಸುದ್ದಿಗಳು ನಿಜವಲ್ಲ. ಪತ್ರಿಕೆಗಳು ನಿಖರ ಸುದ್ದಿ ಕೊಡುವಲ್ಲಿ ಮುಂದಾಗಿವೆ. ಸುದ್ದಿ ಖಚಿತಪಡಿಸಿಕೊಂಡ ಮೇಲೆ ಪ್ರಕಟಿಸಲು ವರದಿ ನೀಡಬೇಕು. ಸರಿಯಾದ ಸುದ್ದಿ, ಮಾಹಿತಿ ಪತ್ರಿಕೆಗಳಿಗೆ ನೀಡುವುದು ಪತ್ರಕರ್ತರ ಹೊಣೆಯಾಗಿದೆ. 

ಸುದ್ದಿ ಓದಿ