ಜನಸಂಪರ್ಕ ಸಭೆ ಮುಖಾಂತರ ಆದ್ಯತಾ ಪಟ್ಟಿ ಸಿದ್ಧಪಡಿಸಿ

ಜನಸಂಪರ್ಕ ಸಭೆ ಮುಖಾಂತರ ಆದ್ಯತಾ ಪಟ್ಟಿ ಸಿದ್ಧಪಡಿಸಿ

             ಬೀದರ್ 18:   ಜನರ ಬದುಕು ಹಸನಗೊಳಿಸಲು ಅವರ ಬೇಡಿಕೆಗೆ ಅನುಗುಣವಾಗಿ ಕರಡು ಯೋಜನೆ ರೂಪಿಸಿ ಸಲ್ಲಿಸಿದಲ್ಲಿ  ಸರ್ಕಾರ ಗಮನಕ್ಕೆ ತಂದು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು  ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ನಿಟ್ಟಿನಲ್ಲಿ   ಅಧಿಕಾರಿಗಳು  ತಳಹಂತದಿಂದ ವರದಿ ಸಿದ್ದಪಡಿಸಿಕೊಂಡು ಬರಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು. 

              ಬೀದರ್ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಅಧ್ಯಕ್ಷತೆಯಲ್ಲಿ 2026-27ನೇ ಸಾಲಿನ ಕರುಡು ಅಭಿವೃದ್ಧಿ ಯೋಜನೆ ತಯಾರಿಸುವ ಕುರಿತು ನಗರ ಸ್ಥಳೀಯ ಸಂಸ್ಥೆಗಳ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿ ಕುರಿತು  ಸಮಾಲೋಚನೆ ನಡೆಸಿ ಮಾತನಾಡಿದರು.  

             ನಾವೆಲ್ಲ ಹಳ್ಳಿಯಿಂದಲೇ ಬಂದವರಾಗಿದ್ದೇವೆ. ಹಳ್ಳಿ ಜನರ ಸಮಸ್ಯೆ, ನೋವು ನಲಿವನ್ನು ಹತ್ತಿರದಿಂದ ಕಂಡ ನಮಗೆ ಅವರ ಸಂಕಷ್ಟಕ್ಕೆ ಪರಿಹಾರ ನೀಡುವ ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರಿಂದಾಗಬೇಕಿದೆ. ಹಳ್ಳಿಯಿಂದ ಪಟ್ಟಣಕ್ಕೆ, ಪಟ್ಟಣದಿಂದ ಹೈವೇಗೆ ರಸ್ತೆ ಮಾಡಿದರೆ ಸಾಲದು. ಕೃಷಿಯೇ ಜೀವನಕ್ಕೆ ಆಧಾರವಾಗಿರುವಾಗ ಮನೆಯಿಂದ ಹೊಲಕ್ಕೂ ರಸ್ತೆ ಬೇಕಲ್ಲವೇ ಅಧಿಕಾರಿಗಳು, ಎಂಜಿನಿಯರ್‌ಗಳು ರಸ್ತೆ ಮಾಡುವಾಗ ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡು ಅವಶ್ಯಕತೆ ಇರುವ ಜಮೀನಿನ ರಸ್ತೆಯ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.  

             ಅಧಿಕಾರಿಗಳು ಜನತೆಯ ಅವಶ್ಯಕತೆಗಳಿಗೆ ಮತ್ತು ಆಕಾಂಕ್ಷೆಗಳಿಗೆ ಹೆಚ್ಚು ಸ್ಪಂದನೆ ನೀಡಬೇಕು.  ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು, ಸಂಪನ್ಮೂಲವನ್ನಾಧರಿಸಿ ಸ್ಥಳೀಯ ಅವಶ್ಯಕತೆ ಗುರುತಿಸುವಿಕೆ, ಸ್ಥಳೀಯ ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಯೋಜನೆಗಳ ನಿರೂಪಣೆ, ಅನುಷ್ಠಾನ ಹಾಗೂ ಮೇಲ್ವಿಚಾರಣೆಯಲ್ಲಿ ಸ್ಥಳೀಯ ಜನತೆಯನ್ನು ತೊಡಗಿಸಿಕೊಳ್ಳಬೇಕು.  

             ಪ್ರತಿ ಗ್ರಾಮಗಳ ಅಭಿವೃದ್ಧಿಗಾಗಿ  ಸ್ಥಳೀಯ ಅವಶ್ಯಕತೆಗಳು ಹಾಗೂ ಅಭಿವೃದ್ಧಿ ಕಾಮಗಾರಿ ಗುರಿತಿಸಲು ಜನಸಂಪರ್ಕ ಸಭೆ ಮುಖಾಂತರ ಆದ್ಯತಾ ಪಟ್ಟಿ ಸಿದ್ಧಪಡಿಸಬೇಕು. ಇವುಗಳನ್ನು ಬೂತ್ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ನಮ್ಮ ಗ್ರಾಮ, ನಮ್ಮ ಯೋಜನೆ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು. ವಿಕಾಸದ ಅಂತರವನ್ನು ತುಂಬಲು ಬೇಕಾದ ಯೋಜನೆಗಳನ್ನು ರೂಪಿಸಿ  ಕರಡು ಯೋಜನೆಯನ್ನು ಸರ್ಕಾರದ ಗಮನಕ್ಕೆ ತಂದು, ಬಜೆಟ್‌ನಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. 

           ಎಲ್ಲಾ ಗ್ರಾಮಗಳಲ್ಲಿ  ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ವಸತಿ ಯೋಜನೆಯ ಪಿಎಂವೈ ಮನೆಗಳ ಬಿಲ್ ಬಾಕಿ ಇರುವ ದೂರು ಬರುತ್ತಿವೆ ಈ ಕುರಿತು ಗಮನ ಹರಿಸಬೇಕು ಮತ್ತು ಇನ್ನು ಬಾಕಿ ಇರುವ ವಸತಿಗಳ ಜಿಪಿಎಸ್ ತಂತ್ರಜ್ಞಾನ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.  ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ತಾಪಂ ಪಂಚಾಯತರಾಜ  ಸಹಾಯಕ ನಿರ್ದೇಶಕರಾದ ಸಂಜುಕುಮಾರ ಕಾಡವಾದ, ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಸುಧೇಶ್ ಮತ್ತಿತರರು ಉಪಸ್ಥಿತರಿದ್ದರು.  ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾಧ್ಯಮ ಸಂಯೋಜಕ, ಸಹಾಯಕ ನಾಗೇಶ್ ಸಿದ್ದಾ. 


ಸುದ್ದಿ ಓದಿ