ಅಕಾಲಿಕ ಮಳೆ, ಬೆಳೆ ನಷ್ಟ ; ಶೀಘ್ರ ಪರಿಹಾರಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 25 : ನಿರಂತರವಾಗಿ ಸುರಿದ ಅಕಾಲಿಕ ಮಳೆಯಿಂದ ಬೆಳೆದ ಫಸಲು ಸಂಪೂರ್ಣವಾಗಿ ನಾಶವಾಗಿದ್ದು ಕೂಡಲೇ ತಾಲೂಕಿನ ಪ್ರತಿಯೊಂದು ಗ್ರಾಮದ ರೈತ ಬೆಳೆಗಳನ್ನು ಸಮೀಕ್ಷೆ ಮಾಡಿ ಶೀಘ್ರವೇ ಪರಿಹಾರ ನೀಡಬೇಕೆಂದು ಗುರುವಾರ ಕೆಪಿಆರ್ಎಸ್ ತಾಲೂಕು ಘಟಕದ ನಾಯಕತ್ವದಲ್ಲಿ ಆಗ್ರಹಿಸಿ ತಹಶಿಲ್ದಾರ್ಗೆ ಮನವಿ ಸಲ್ಲಿಸಿತು.
ಕೆಪಿಆರ್ಎಸ್ನ ಜಿಲ್ಲಾ ಉಪಾಧ್ಯಕ್ಷ ಕೊಟಗಿ ಮಲ್ಲಿಕಾರ್ಜುನ ಮಾತನಾಡುತ್ತಾ ತಾಲೂಕಿನ ಹತ್ತಾರು ಕಡೆ ಅಕಾಲಿಕ ಮಳೆಯಿಂದ ರೈತ ಬೆಳೆದ ಬೆಳೆ ಸಂಪೂರ್ಣ ನಾಶವಾಗಿದ್ದು, ನಿರಂತರ ಮಳೆಯಿಂದ ನಷ್ಟಕ್ಕೊಳಗಾದ ಬೆಳೆಗಳನ್ನು ಸಮೀಕ್ಷೆ ನಡೆಸಿ ಕೂಡಲೇ ಮೆಣಸಿನಕಾಯಿ ಬೆಳೆಗೆ ಹೆಕ್ಟೇರ್ಗೆ ಒಂದು ಲಕ್ಷ, ಉಳಿದಂತೆ ಮೆಕ್ಕೆಜೋಳ, ಭತ್ತ, ಶೇಂಗಾ, ತೊಗರಿ, ಸಜ್ಜೆ, ರಾಗಿ ಸೇರಿದಂತೆ ಇನ್ನಿತರೆ ಬೆಳಿಗಳಿಗೆ ಹೆಕ್ಟೇರ್ಗೆ ಎಪ್ಪತೈದು ಸಾವಿರ ರೂಪಾಯಿಗಳನ್ನು ಪರಿಹಾರವಗಿ ನೀಡಬೇಕು ಎಂದು ಒತ್ತಾಯಿಸಿ ಆಗ್ರಹಿಸಿದರು.
ಕೆಎಸ್ಡಿಎಸ್ನ ರಂಗಪ್ಪ ದಾಸರ್ ಮಾತನಾಡಿ ದೇಶದ ಬೆನ್ನೆಲುಬಾದ ರೈತ ಒಂದೆಡೆ ಬೆಳೆದ ಬೆಲೆಗೆ ವೈಜ್ಞಾನಿಕ ಬೆಲೆ ಸಿಗದೆ ಪರಿತಪಿಸುತ್ತಿರುವ ಈ ಪರಿಸ್ಥಿತಿಯಲ್ಲಿ ಅಕಾಲಿಕ ಮಳೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ, ಸರಕಾರವು ಶೀಘ್ರವೇ ಅಕಾಲಿಕ ಮಳೆಗೆ ತುತ್ತಾಗಿ ನಾಶವಾದ ಬೆಳೆಗಳನ್ನು ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ತಾಲೂಕಾಧ್ಯಕ್ಷ ಕೆ.ಗಾಳೆಪ್ಪ ಮಾತನಾಡಿ ಅಕಾಲಿಕ ಮಳೆಯಿಂದ ಹಾಕಿದ ಬಂಡವಾಳ, ವ್ಯಯಿಸಿದ ಶ್ರಮ ಸಂಪೂರ್ಣ ವ್ಯೆರ್ಥವಾಗಿದ್ದು ರೈತ ತೀವ್ರ ಸಂಕಷ್ಟ ಎದುರಿಸುತ್ತಿದ್ದು ಕೂಡಲೇ ತಾಲೂಕಿನ ಪ್ರತಿಯೊಂದು ಗ್ರಾಮದ ರೈತ ಬೆಳೆಗಳನ್ನು ಸಮೀಕ್ಷೆ ಮಾಡಿ ಶೀಘ್ರವೇ ಪರಿಹಾರ ನೀಡಬೇಕು, ದೇಶದ ಬೆನ್ನೆಲುಬಾದರೈತನನ್ನು ಕಡೆಗಣಿಸದಂತೆ ಕೂಡಲೇ ಅನ್ನದಾತನಿಗೆ ಸರ್ಕಾರವು ನಷ್ಟವನ್ನು ಭರಿಸಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸರೋಜಾ, ಅಂಜಿನಪ್ಪ, ಸೋಗಿ ಬಸವರಾಜ, ಬಿ.ಖಾಜಾ ಹುಸೇನ್, ಡಿ.ಸ್ವಾಮಿ, ಯಮುನಪ್ಪ, ತಿಂದಪ್ಪ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಇದ್ದರು.