ಬಳ್ಳಾರಿ ಜಿಲ್ಲಾ ಜನತಾದಳದ ಪೂರ್ವಭಾವಿ ಸಭೆ
ಬಳ್ಳಾರಿ: ಜಿಲ್ಲಾ ಜನತಾದಳ (ಜಾತ್ಯಾತೀತ) ಕಛೇರಿಯಲ್ಲಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳು, ಪದಾಧಿಕಾರಿಗಳ ಸಭೆಯನ್ನು ಮಂಗಳವಾರದಂದು ನಡೆಸಲಾಯಿತು.
ಜಾತ್ಯತೀತ ಜನತಾದಳ ಪಕ್ಷದ ಕಲ್ಯಾಣ ಕರ್ನಾಟಕದ ವೀಕ್ಷಕರಾಗಿ ಡಿ.ಮೀನಳ್ಳಿ ತಾಯಣ್ಣ, ಪ್ರತಾಪ್ರೆಡ್ಡಿ ಹಾಗೂ ಹಡಗಲಿಯ ಪುತ್ರೇಶ್ ಅವರು ರಾಜ್ಯ ಘಟಕದಿಂದ ನೇಮಕಗೊಂಡಿದ್ದು, ಬರುವ ತಿಂಗಳು ಮಾರ್ಚ್ 1ರಂದು ಬಳ್ಳಾರಿ ಜಿಲ್ಲೆಗೆ ಪಕ್ಷದ ರಾಜ್ಯ ಘಟಕದಿಂದ ವೀಕ್ಷಕ ಮಾಜಿ ಸಚಿವ ವೆಂಕಟರಾವ್ ನಾಡಗೌಡರು, ಬಂಡೆಪ್ಪ ಕಾಶೆಂಪೂರ್, ರಾಜಾ ವೆಂಕಟಪ್ಪ ನಾಯಕ ಹಾಗೂ ಇನ್ನೂ ಕೆಲವು ವೀಕ್ಷಕರು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ.ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ವೀಕ್ಷಕ ಡಿ.ಮೀನಳ್ಳಿ ತಾಯಣ್ಣ ಅವರು ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಉತ್ತಮ ಆಡಳಿತ ನೀಡುವಲ್ಲಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಪಕ್ಷವು ಸಂಘಟನೆಯಾಗಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರವನ್ನು ಜನತೆ ನಿರೀಕ್ಷಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕಕ್ಕೆ ಭವಿಷ್ಯವಿಲ್ಲದಂತಾಗಿದೆ. ರಾಜ್ಯದಲ್ಲಿ ಜನತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದಾರೆ. ಬಿಜೆಪಿಯು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೀತಿ, ಸಾರ್ವತ್ರಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಿ ನಿರುದ್ಯೋಗವನ್ನು ಸೃಷ್ಟಿಸಿದೆ. ಇಂತಹ ಸರ್ಕಾರವನ್ನು ಕಿತ್ತೊಗೆದು ಜೆಡಿಎಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ರಾಜ್ಯದ ಜನತೆಯ ಬಳಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ 99 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸರ್ಕಾರ ರಚನೆಗೆ ಅಗತ್ಯವಿರುವ ಇನ್ನುಳಿದ ಸಂಖ್ಯೆಯ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಬಹುಮತ ಸಾಬೀತು ಪಡಿಸುವುದರೊಂದಿಗೆ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ನುಡಿದರು.
ನೂತನ ವೀಕ್ಷಕ ಹಡಗಲಿಯ ಪುತ್ರೇಶ್ ,ಹಿರಿಯ ಮುಖಂಡ ಕುರುಗೋಡಿನ ಮಂಜುನಾಥ ಗೌಡ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಂಡೇಗೌಡ, ಹಗರಿಬೊಮ್ಮನಹಳ್ಳಿಯ ಪಕ್ಷದ ಮುಖಂಡ ವೆಂಕಟೇಶ್ ತಿಪ್ಪೇಸ್ವಾಮಿ, ಬಳ್ಳಾರಿ ನಗರ ಅಧ್ಯಕ್ಷ ವಿಜಯಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಕಪ್ಪಗಲ್ ರಸೂಲ್ ಸಾಬ್, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷÀ ಡಾ.ಕೆ.ಬಸಪ್ಪ, ಸಿದ್ದೇಶ್.ಡಿ, ವಾದಿರಾಜಶೆಟ್ಟಿ, ಹೊಸಪೇಟೆ ಮಹಮ್ಮದ್ ರಸೂಲ್, ಕಾರಪ್ಪ, ಸೋಮಪ್ಪ ಸಂಡೂರು, ಮಲ್ಲಿಕಾರ್ಜುನಗೌಡ ಹ.ಬೊ.ಹಳ್ಳಿ, ಸಿರುಗುಪ್ಪದ ಮಂಜುನಾಥ, ಕಂಪ್ಲಿಯ ಮದಿರೆ ವಿಜಯಕುಮಾರ್, ನಾಗರಾಜ, ಕೇದಾರನಾಥ, ಎಸ್.ಸಿ.ಘಟಕದ ಪೊಂಪಾಪತಿ, ಶ್ರೀನಿವಾಸಕ್ಯಾಂಪ್, ಮುಕ್ಕಣ್ಣ ಮಹಿಳಾ ಮುಖಂಡರಾದ ವೈ.ಗೌಸಿಯಾಬೀ, ರಾಮೇಶ್ವರಿ, ವಿಜಯಕುಮಾರಿ, ಪುಷ್ಪಾ, ಕೋಮಲ ಮುಂತಾದ ನೂರಾರು ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
ಈ ಸಭೆಯಲ್ಲಿ ನೂತನವಾಗಿ ವೀಕ್ಷಕರಾಗಿ ಅಯ್ಕೆಯಾದ ಡಿ.ಮೀನಳ್ಳಿ ತಾಯಣ್ಣ ಮತ್ತು ಹಡಗಲಿಯ ಪುತ್ರೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.