ಬೆಳಗಾವಿ

ಪ್ರಜಾಸೇವೆ ಅಭಿಯಾನದಿಂದ ಜನರಿಗೆ ಅನುಕೂಲ: ಬಾಬಾಸಾಹೇಬ ಪಾಟೀಲ

ಪ್ರಜಾಸೇವೆ ಅಭಿಯಾನದಿಂದ ಜನರಿಗೆ ಅನುಕೂಲ: ಬಾಬಾಸಾಹೇಬ ಪಾಟೀಲ

ಪ್ರಜಾಸೇವೆ ಅಭಿಯಾನದಿಂದ ಜನರಿಗೆ ಅನುಕೂಲ: ಬಾಬಾಸಾಹೇಬ ಪಾಟೀಲ  

ನೇಸರಗಿ 12: ಪಿಂಚಣಿ, ಕಂದಾಯ, ವಸತಿ, ಪಡಿತರ, ಸಾರಿಗೆ, ರಸ್ತೆ, ಕುಡಿಯುವ ನೀರು, ದೇವಸ್ಥಾನ, ಸರ್ಕಾರಿ ಶಾಲೆ, ಅಂಗನವಾಡಿ, ಜಲಜೀವನ, ಪೊಲೀಸ್ ಸೇವೆ, ಕೆರೆ ತುಂಬುವ ಯೋಜನೆ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಸಾರ್ವಜನಿಕರು ದೂರು ದಾಖಲಿಸಿದ ಕೆಲವೇ ಸಮಯದಲ್ಲಿ ಪರಿಹಾರ ದೊರೆಯುವಂತೆ ‘ಪ್ರಜಾಸೇವೆ ಅಭಿಯಾನ’ ವನ್ನು ರೂಪಿಸಲಾಗಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.  

ಸಮೀಪದ ನೇಗಿನಹಾಳ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಪ್ರಜಾಸೇವೆ ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಲಭ್ಯವಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಖರ್ಚು ಮಾಡಿಕೊಂಡು ಜಿಲ್ಲಾ ಅಥವಾ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು, ಈ ಅಭಿಯಾನದ ಮೂಲಕ ಅಧಿಕಾರಿಗಳು ಜನರ ಬಳಿಗೆ ಬಂದು ಸೇವೆ ಒದಗಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಂದ ಸ್ಥಳದಲ್ಲಿಯೇ ಮಾಹಿತಿ ಪಡೆದು ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು. ಶಾಲೆಯ ಆವರಣದಲ್ಲಿ ವಿವಿಧ ಇಲಾಖೆಗಳಿಗಾಗಿ ಮಾಡಲಾಗಿದ್ದ ಮಳಿಗೆಗಳಿಗೆ ತೆರಳಿ ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ ಪರಿಹಾರ ಪಡೆಯುವಂತೆ ಸೂಚಿಸಿದರು.  

ಅಧಿಕಾರಿಗಳಿಗೆ ಸೂಚನೆ  

ರೈತರಿಗೆ ಲೋಡ್ಶೆಡ್ಡಿಂಗ್ನಿಂದ ತೊಂದರೆಯಾಗುತ್ತಿದೆ. ಬಸ್ ಪ್ರಯಾಣದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಬಡಜನರಿಗೆ ಪಿಂಚಣಿ ಸಮರ​‍್ಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಪಹಣಿ, ಉತಾರ ಸೇರಿದಂತೆ ಕಂದಾಯ ಸೇವೆಗಳು ಸರಿಯಾಗಿ ದೊರೆಯಬೇಕು. ಪಡಿತರ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸೇವೆಗಳು ಹಾಗೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆದ್ಯತೆ ನೀಡಿ, ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.  

ಈ ಸಂದರ್ಭದಲ್ಲಿ ಬೈಲಹೊಂಗಲ ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜು ಜುನ್ನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ