ಜಮಖಂಡಿಯಲ್ಲಿ ಪ್ರಜಾಸೇವಾ ಆಂದೋಲನ: 4,524 ಅರ್ಜಿಗಳ ಸ್ವೀಕಾರ
ಜಮಖಂಡಿಯಲ್ಲಿ ಪ್ರಜಾಸೇವಾ ಆಂದೋಲನ: 4,524 ಅರ್ಜಿಗಳ ಸ್ವೀಕಾರ
ಜಮಖಂಡಿ 04 : ಪ್ರಜಾಸೇವೆ ಆಂದೋಲನ ಕೇವಲ ಕಣ್ಣೊರೆಸುವ ಕಾರ್ಯಕ್ರಮವಲ್ಲ. ಪ್ರತಿಯೊಂದು ಅರ್ಜಿಗೂ ಸೂಕ್ತವಾಗಿ ಸ್ಪಂದಿಸಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದ ಬಸವ ಭವನದಲ್ಲಿ ಜಿಲ್ಲಾ ಆಡಳಿತದ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಉದ್ಘಾಟಿಸಿ ಮಾತನಾಡಿದರು ಅವರು, ಜಮಖಂಡಿಯಲ್ಲಿ ಈಗಾಗಲೇ 102 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಪಿಂಚಣಿ, ವಿವಿಧ ಸೌಲಭ್ಯ ಹಾಗೂ ಪರಿಹಾರಗಳನ್ನು ಒದಗಿಸುವ ಕಾರ್ಯ ನಡೆದಿದೆ. ಜಿಲ್ಲೆಯಾದ್ಯಂತ ಈವರೆಗೆ 4,524 ಅರ್ಜಿಗಳು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಸುಮಾರು 3,910 ಅರ್ಜಿಗಳಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರ ಪ್ರಜಾಸೇವೆ ಆಂದೋಲನವನ್ನು ಆರಂಭಿಸಿದ್ದು, ಸಲ್ಲಿಕೆಯಾಗುವ ಅರ್ಜಿಗಳಿಗೆ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅರ್ಜಿಗೆ ಉತ್ತರ ನೀಡದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಯುವಕರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ್ ಜೋಡೋ ಸಂಘಟನೆಗಳನ್ನು ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ ಮಟ್ಟದಲ್ಲಿ ರಚಿಸಲು ಸರ್ಕಾರ ಮುಂದಾಗಿದೆ. ಯುವ ಸಂಘಟನೆಗಳ ಮೂಲಕ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಅನುದಾನ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು. ಯುವಕರಿಗೆ ನೆರವಾಗುವ ಯುವನಿಧಿ ಯೋಜನೆಗೆ ಬಾಗಲಕೋಟೆ ಜಿಲ್ಲೆಯನ್ನು ಯೋಜನೆಗೆ ಸೇರಿಸುವ ಮೂಲಕ ಯುವಕರು ಹಾಗೂ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿಯೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರಜಾಸೇವೆ ಆಂದೋಲನ ಮುಂದುವರಿಯಲಿದೆ. ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಸಾರ್ವಜನಿಕರು ಶಾಸಕರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಸರ್ಕಾರ ಜನರ ಪರವಾಗಿ ನಿಂತು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೀಲಕುಮಾರ ದಡ್ಡಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಲ್ಲಪ್ಪ ಗಿರಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ, ಅಲ್ಪಸಂಖ್ಯಾತರ ನಿಗಮದ ನಿರ್ದೇಶಕ ಸಮೀರ ಕಂಗನೊಳ್ಳಿ, ಜಿಪಂ ಕಾರ್ಯದರ್ಶಿ ಎನ್.ವಾಯ್. ಬಸರಿಗಿಡದ ಇತರರಿದ್ದರು. ತಹಸೀಲ್ದಾರ ಅನೀಲ ಬಡಿಗೇರ ಸ್ವಾಗತಿಸಿದರು, ಎಸಿ ಶ್ವೇತಾ ಬೀಡಿಕರ ಪ್ರಾಸ್ತವಿಕವಾಗಿ ಮಾತನಾಡಿದರು.