ಜಮಖಂಡಿ ಕಸಾಪ ಕಾರ್ಯವೈಖರಿ, ಹಣಕಾಸು ವ್ಯವಹಾರಗಳ ಪರೀಶೀಲನೆಗೆ ಆಗ್ರಹ
ಜಮಖಂಡಿ, ಅ.2: ಕನ್ನಡ ಸಾಹಿತ್ಯ ಪರಿಷತ್ತಿನ ಜಮಖಂಡಿ ತಾಲೂಕು ಘಟಕದ ಕಾರ್ಯವೈಖರಿ, ಹಣಕಾಸು ವ್ಯವಹಾರಗಳು ಹಾಗೂ ಸರ್ಕಾರಿ ನೌಕರರ ಸೇವಾ ನಿಯಮಗಳ ಪಾಲನೆ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ಪರೀಶೀಲನೆ ನಡೆಸಬೇಕು ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೋಪಿನಾಥ ಮಿಶಿ, ಭೀಮ ಆರ್ಮಿಯ ಜಿಲ್ಲಾ ಅಧ್ಯಕ್ಷ ರಮೇಶ ಬಳೋಳಗಿಡದ ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ನಗರದ ಅನ್ನಪೂರ್ಣೇಶ್ವರಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಖಂಡಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ ಅವರು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಕಸಾಪ ಚಟುವಟಿಕೆಗಳು ಮತ್ತು ಸರ್ಕಾರಿ ಕರ್ತವ್ಯಗಳ ನಡುವಿನ ಹೊಂದಾಣಿಕೆ ಕುರಿತು ಶಿಕ್ಷಣ ಇಲಾಖೆ ಪರೀಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಕಸಾಪ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದರೆ, ಯಾರಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ, ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿದೆ, ಹಣ ಸ್ವೀಕರಿಸಿದ ಕುರಿತು ರಸೀದಿ ನೀಡಲಾಗಿದೆಯೇ ಹಾಗೂ ಯಾವ ಖಾತೆಗೆ ಜಮೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.