ಜಮಖಂಡಿ

ನಗರಕ್ಕೆ 150 ಹಾಸಿಗೆಗಳ ಹೆಚ್ಚುವರಿ ಆಸ್ಪತ್ರೆ ಮಂಜೂರು

ನಗರಕ್ಕೆ 150 ಹಾಸಿಗೆಗಳ ಹೆಚ್ಚುವರಿ ಆಸ್ಪತ್ರೆ ಮಂಜೂರು

ಲೋಕದರ್ಶನ ವರದಿ 

ಜಮಖಂಡಿ 01 : ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆಯನ್ನು ಪರಿಗಣಿಸಿ, 150 ಹಾಸಿಗೆಗಳ ಹೆಚ್ಚುವರಿ ಆಸ್ಪತ್ರೆ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.  

ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಶಿವಾನಂದ ಪಾಟೀಲ ಹಾಗೂ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ಜಮಖಂಡಿಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ರೋಗಿಗಳ ಸಂಖ್ಯೆ ಕುರಿತು ಮಾಹಿತಿ ನೀಡಿ, ಹೆಚ್ಚುವರಿ ಆಸ್ಪತ್ರೆ ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಇದೀಗ ಈ ಪ್ರಯತ್ನಕ್ಕೆ ಫಲ ದೊರೆತಿದೆ ಎಂದರು.  

ಪ್ರಸ್ತುತ 100 ಹಾಸಿಗೆಗಳ ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜಿನ ಅಗತ್ಯಕ್ಕೆ ಬಳಸಿಕೊಳ್ಳಬೇಕಾದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ 150 ಹಾಸಿಗೆಗಳ ಹೆಚ್ಚುವರಿ ಆಸ್ಪತ್ರೆ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.  

ಹೊಸ ಆಸ್ಪತ್ರೆಯನ್ನು ನಗರದ ಹೊರಭಾಗದಲ್ಲಿ ನಿರ್ಮಿಸುವ ಬದಲು, ಈಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ 100 ಹಾಸಿಗೆಗಳ ಜನರಲ್ ಆಸ್ಪತ್ರೆ ಇರುವ ಆವರಣದಲ್ಲಿಯೇ ನಿರ್ಮಿಸುವ ಸಾಧ್ಯತೆ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರೀಶೀಲನೆ ನಡೆಸಲಾಗಿದೆ.  

ಈ ಸಂದರ್ಭದಲ್ಲಿ ಮಹೇಶ ಕೋಳಿ, ಎ.ಆರ್‌. ಸಿಂಧೆ, ದಾನೇಶ ಘಾಟಗೆ, ಸಂಜು ಮೀಸಿ, ಪುಟ್ಟು ಪಾಣಿ, ಕುಮಾರ ಆಲಗೂರ, ಮೀರಾ ಒಂಟಮರಿ, ಅಕ್ತರ್ ಜಮಾದಾರ, ರಾಘವೇಂದ್ರ ಆಲಬಾಳ, ಅಸ್ಲಂ ರಜಾರೆ, ಪ್ರಹ್ಲಾದ ಕುಲಕರ್ಣಿ, ಚನಬಸು ಗುನದಾಳ, ಬಸೂ ಹರಕಂಗಿ, ಅಶೋಕ ಕರಜಗಿ, ಮಲ್ಲು ಶಿರಹಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ