ಆ.31ರಂದು ಗೋಹತ್ಯಾ ನಿಷೇಧ ಕಾಯ್ದೆ ಅನುಷ್ಠಾನ ಕುರಿತು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣರಿಂದ ಸಭೆ
ಬಳ್ಳಾರಿ 30: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಆ.31ರಂದು ಬೆಳಗ್ಗೆ 10ಕ್ಕೆ ಹೊಸಪೇಟೆಯ (ವಿಜಯನಗರ) ಮುನಿಸಿಪಾಲಿಟಿ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.30ರಂದು ಸಂಜೆ 7ಕ್ಕೆ ಮುನಿರಾಬಾದ್ ವೈಕುಂಠ ಅತಿಥಿಗೃಹಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿರುವ ಸಚಿವ ಚವ್ಹಾಣ್ ಅವರು ಆ.31ರಂದು ಬೆಳಗ್ಗೆ 10ಕ್ಕೆ ಹೊಸಪೇಟೆಯ (ವಿಜಯನಗರ) ಮುನಿಸಿಪಾಲಿಟಿ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪಶುಸಂಗೋಪನಾ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಗೋಹತ್ಯೆ ನಿಷೇದ ಕಾಯ್ದೆ ಅನುಷ್ಟಾನದ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ. ನಂತರ 24/7 ಪ್ರಾಣಿ ಕಲ್ಯಾಣ ಸಹಾಯವಾಣಿ(ವಾರ್ರೂಮ್) ಕಾರ್ಯವೈಖರಿ ಬಗ್ಗೆ ಚರ್ಚಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಂತರ ಮಧ್ಯಾಹ್ನ 12.30ಕ್ಕೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಒಂದಾವರ್ತಿ ಪ್ರೋತ್ಸಾಹಧನ ಚೆಕ್ ವಿತರಣೆ ಹಾಗೂ ಕರ್ನಾಟಕ ಸರ್ಕಾರ ಮೈಸೂರು ಪಿಂಜಾರಪೋಳ ಮತ್ತು ಇತರೆ ಗೋಶಾಲೆಗಳಿಗೆ ನೆರವು ಕಾರ್ಯಕ್ರಮದಡಿಯಲ್ಲಿ ಅನುದಾನ ಬಿಡುಗಡೆ ಆದೇಶಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ನಂತರ ಸಚಿವರು ರಸ್ತೆ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ಪ್ರಯಾಣ ಬೆಳಸಲಿದ್ದಾರೆ.