ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ತಂತಿಗಳು : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯ ನಿವಾಸಿಗಳ ಆಕ್ರೋಶ
ಲೋಕದರ್ಶನ ವರದಿ
ಕಂಪ್ಲಿ 07: ಸ್ಥಳೀಯ ಎಂ.ಡಿ.ಕ್ಯಾಂಪಿನ ಮನೆಗಳ ಮೇಲೆ ಹಾದು ಹೋಗಿರುವ ಅಪಾಯದ ವಿದ್ಯುತ್ ತಂತಿಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ, ನಿವಾಸಿಗಳು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಮಂಗಳವಾರ ಸಲ್ಲಿಸಿದರು. ನಂತರ ಮುಖಂಡ ಕರಡಿ ವಲಿಸಾಬ್ ಮಾತಬಾಡಿ, ಇಲ್ಲಿನ ನಿವಾಸಿಗಳು ವಿದ್ಯುತ್ ಅಪಾಯದ ನಡುವೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ತಂತಿಗಳು ಮನೆ ಮೇಲೆ ಜೋತು ಬಿದ್ದಿವೆ. ಜೋರಾಗಿ ಮಳೆ ಬೀಸಿದಾಗ ತಂತಿಗಳು ಒಂದಾನೊಂದು ಸ್ಪರ್ಶಿಸಿ, ಬೆಂಕಿ ಬೀಳುತ್ತದೆ. ಇಲ್ಲಿನ ನಿವಾಸಿಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಕೆಲ ಸಲ ಮಕ್ಕಳನ್ನು ನಿವಾಸಿಗಳು ಅಪಾಯದಿಂದ ಪಾರು ಮಾಡಿದ್ದಾರೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ, ಪ್ರಯೋಜನೆಯಾಗುತ್ತಿಲ್ಲ.
ಸ್ಥಳಕ್ಕೆ ಜೆಸ್ಕಾಂ ಲೈನ್ ಮ್ಯಾನ್ ಮತ್ತು ಜೆಇ ಬಂದು ಪರೀಶೀಲಿಸಿದರೂ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ. ಆದ್ದರಿಂದ ಮಾನ್ಯ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಈಗಾಲಾದರೂ ಸಮಸ್ಯೆಗೆ ಬಗೆಹರಿಸುತ್ತದೆ ಎಂಬ ವಿಶ್ವಾಸವಿದೆ. ಆದರೆ, ಇದೇ ತರ ಬೇಜವಾಬ್ದಾರಿ ತೋರಿದಲ್ಲಿ ಮುಂದಿನ ದಿನದಲ್ಲಿ ಜೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಲಾಗುವುದು. ಈ ಸಂದರ್ಭದಲ್ಲಿ ಹಮಾಲಿ ಸಂಘದ ಗೌರವಾಧ್ಯಕ್ಷ ಬಾಲಪ್ಪ, ಜಂಡೆಕಟ್ಟೆ ಅಂಜಿನಪ್ಪ, ಕೆ.ಹೊನ್ನೂರಸ್ವಾಮಿ, ಸಿ.ಬಸವರಾಜ ಸೇರಿದಂತೆ ನಿವಾಸಿಗಳಿದ್ದರು. ಸ್ಥಳ ಪರೀಶೀಲನೆ : ಇಲ್ಲಿನ ಎಂ.ಡಿ.ಕ್ಯಾಂಪಿನ ಸ್ಲಂ ವಾರ್ಡಿನ ಮನೆಗಳ ಮೇಲೆ ಜೋತು ಬಿದ್ದ ಸ್ಥಳಕ್ಕೆ ತಹಶೀಲ್ದಾರ್ ಜೂಗಲ್ ಮಂಜುನಾಯಕ ಭೇಟಿ ನೀಡಿ, ಪರೀಶೀಲಿಸಿ, ಸೂಕ್ತಕ್ರಮಕ್ಕೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.