ಅಧಿಕಾರ ಶಾಶ್ವತವಲ್ಲ, ಇದ್ದಾಗ ಜನರ ಸೇವೆ ಮಾಡಿ: ಸವದಿ
ಅಧಿಕಾರ ಶಾಶ್ವತವಲ್ಲ, ಇದ್ದಾಗ ಜನರ ಸೇವೆ ಮಾಡಿ: ಸವದಿ
ಅಥಣಿ 12: ಅಧಿಕಾರ, ಅಂತಸ್ತು ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ಅದನ್ನು ಸಾರ್ವಜನಿಕರ ಸೇವೆಗೆ ಬಳಸಿಕೊಂಡು ಒಳ್ಳೆಯ ಹೆಸರು ಗಳಿಸಿದಾಗ ಮಾತ್ರ ಅಧಿಕಾರದ ಸದುಪಯೋಗ ವಾಗುತ್ತದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಸರ್ಕಾರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಅವರು ಅಥಣಿಯಲ್ಲಿ ನಡೆದ ‘ಪ್ರಜಾ ಸೇವೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಮೊದಲು ನಾನು ಶಾಸಕನಾಗಿದ್ದೆ, ಈಗ ಸಚಿವನಾಗಿದ್ದೇನೆ. ಆದರೆ ಈ ಅಧಿಕಾರ ಯಾವಾಗ ಹೋಗುತ್ತದೆ ಎಂಬುದು ಗೊತ್ತಿಲ್ಲ. ನಾನು ಅಧಿಕಾರದಲ್ಲಿರುವ ಅವಧಿಯಲ್ಲಿ ಮಾಡಿದ ಜನಪರ ಹಾಗೂ ಉತ್ತಮ ಕಾರ್ಯಗಳು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅದೇ ರೀತಿ ಸರ್ಕಾರಿ ಅಧಿಕಾರಿಗಳು ಕೂಡ ತಮ್ಮ ಅಧಿಕಾರವನ್ನು ಜವಾಬ್ದಾರಿ ಎಂದು ಭಾವಿಸಿ ಜನರ ಸೇವೆ ಮಾಡಬೇಕು. ಆಗ ಮಾತ್ರ ಜನ ಮೆಚ್ಚುವ ಅಧಿಕಾರಿಗಳಾಗಲು ಸಾಧ್ಯ,” ಎಂದು ಹೇಳಿದರು.
ಸರ್ಕಾರಿ ನಿಯಮದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನೀರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು (ತಲಾಟಿಗಳು) ತಮ್ಮ ತಮ್ಮ ಕೇಂದ್ರ ಸ್ಥಾನಗಳಲ್ಲಿಯೇ ವಾಸ್ತವ್ಯ ಇರಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಅಧಿಕಾರಿಗಳೇ ಜನರ ಬಳಿಗೆ ತೆರಳಿ ಸೇವೆ ನೀಡಬೇಕು. ಆದರೆ, ಜನರು ತಮ್ಮ ಕೆಲಸಗಳಿಗಾಗಿ ಅಧಿಕಾರಿಗಳನ್ನು ಹುಡುಕಿಕೊಂಡು ಅಥಣಿಗೆ ಬರುವಂತಾಗಿದೆ. ಹೀಗಾಗಿ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಸ್ಥಳೀಯವಾಗಿ ಲಭ್ಯವಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸವದಿ ಸೂಚಿಸಿದರು. ಕಾರ್ಯಕ್ರಮದಲ್ಲಿ ಸಚಿವರು ನೂರಕ್ಕೂ ಹೆಚ್ಚು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ, ಆಯಾ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಹಲವು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಿದರು. ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡ ‘ಪ್ರಜಾ ಸೇವೆ’ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿದರಾಯ ಭೋಸಗಿ, ತಾಲೂಕು ಪಂಚಾಯಿತಿ ಸಿಇಒ ಶಿವಾನಂದ ಕಲ್ಲಾಪುರ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.