ಮೂಢನಂಬಿಕೆ ವಿರುದ್ದ ಸೆಡ್ಡು : ಬೆಳಗಾವಿ ಸ್ಮಶಾನದಲ್ಲಿ ನೂತನ ಅಟೋ ರಿಕ್ಷಾಗೆ ಪೂಜೆ : ಸತೀಶ ಜಾರಕಿಹೊಳಿ ದಾರಿದೀಪ
ಬೆಳಗಾವಿ : ಬಡ ಹಾಗೂ ಹಿಂದುಳಿದ ಜನರು ಮೂಢನಂಬಿಕೆಯಿಂದ ಹೊರಬಂದು ತಮ್ಮ ಜೀವನ ಸುಧಾರಣೆ ಮಾಡಿಕೊಳ್ಳಲಿ ಎನ್ನುವ ಧೇಯದೊಂದಿಗೆ ಸಚಿವ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮ ಹಾಗೂ ತಮ್ಮ ವಾಹನಕ್ಕೆ ಸ್ಮಶಾನ ಭೂಮಿಯಿಂದಲೇ ಚಾಲನೆ ನೀಡುತ್ತಿದ್ದರು. ಇದೇ ದಾರಿ ತುಳಿದ ಯುವಕನೋರ್ವ ತಾವು ಖರೀದಿಸಿದ್ದ ಅಟೋ ರಿಕ್ಷಾಗೆ ಬೆಳಗಾವಿ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ಬುದ್ದ ಬಸವ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಮಂಗಳವಾರ ಚಾಲನೆ ನೀಡಿದ್ದಾರೆ.
ಹೌದು ಓದುಗರೇ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಕಲ್ಲಪ್ಪ ಮೇಲಗೀರಿ ಎನ್ನುವ ಯುವಕ ತನ್ನ ಅಟೋ ರಿಕ್ಷಾಗೆ ಸ್ಮಶಾನದಲ್ಲಿ ಚಾಲನೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಸಂಕೇಶ್ವರ ಪಟ್ಟಣದ ಕಲ್ಲಪ್ಪ ಮೇಲಗೀರಿ ಇವರು ಸಚಿವ ಸತೀಶ ಜಾರಕಿಹೊಳಿ ಅವರ ಅಭಿಮಾನಿಯಾಗಿದ್ದು, ಇವರು ಮಂಗಳವಾರ ಮಧ್ಯಾಹ್ನ ಬೆಳಗಾವಿ ನಗರಕ್ಕೆ ಬಂದು ಹಳೆ ಪಿಬಿ ರಸ್ತೆಯಲ್ಲಿನ ಶೋ ರೂಂನಲ್ಲಿ ಹೊಸ ಅಟೋ ರಿಕ್ಷಾ ಒಂದನ್ನು ಖರೀದಿಸಿದ್ದರು.
ಬಳಿಕ ಮಂಗಳವಾರ ಸಂಜೆ ವೇಳೆಯಲ್ಲಿ ಆ ನೂತನ ಅಟೋ ರಿಕ್ಷಾ ಹಾಗೂ ತನ್ನ ಗೆಳೆಯರೊಂದಿಗೆ ಮತ್ತು ಸಂಬಂಧಿಕರರೊಂದಿಗೆ ಬೆಳಗಾವಿಯ ಸದಾಶಿವ ನಗರದ ಸ್ಮಶಾನ ಭೂಮಿಗೆ ಆಗಮಿಸಿ ಅಲ್ಲಿ ಅಟೋ ರಿಕ್ಷಾದೊಂದಿಗೆ ಬುದ್ದ, ಬಸವ ಅಂಬೇಡ್ಕರರ ಭಾವಚಿತ್ರವನ್ನು ಇಟ್ಟು ಪುಷ್ಪಾಚರಣೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅದರೊಂದಿಗೆ ಸಿಹಿ ಹಂಚಿ ಸಂಬ್ರಮಿಸಿದ್ದಾರೆ. ಬಳಿಕ ಅಲ್ಲಿಂದ ತನ್ನ ಊರಾದ ಸಂಕೇಶ್ವರಕ್ಕೆ ಗೆಳೆಯರೊಂದಿಗೆ ಪ್ರಯಾಣ ಬೆಳಿಸಿದ್ದಾರೆ.
ಸತೀಶ ಜಾರಕಿಹೊಳಿ ದಾರಿ ತುಳಿದ ಯುವಕ :
ಮುಗ್ದರ ಮನಸ್ಸನ್ನು ಬದಲು ಮಾಡಿ ಅವರಲ್ಲಿರುವ ಮೂಢ ನಂಬಿಕೆ ವಿರುದ್ದ ಸದಾ ಹೋರಾಟ ಮಾಡುತ್ತ ಬಂದಿರುವ ಸಚಿವ ಸತೀಶ ಜಾರಕಿಹೊಳಿ ಅವರು ನಮಗೆ ದಾರಿದೀಪವಾಗಿದ್ದಾರೆ. ಅವರಂತೆ ನಾವು ಕೂಡಾ ಮೂಢನಂಬಿಕೆಯ ವಿರುದ್ದವಾಗಿ ಜನರಲ್ಲಿ ಇರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಾವು ಸದಾಶಿವ ನಗರದ ಸ್ಮಶಾನದಲ್ಲಿ ತಮ್ಮ ಅಟೋ ರಿಕ್ಷಾಗೆ ಚಾಲನೆ ನೀಡುತ್ತಿದ್ದೇನೆ. ನಮಗೆ ಬುದ್ದ, ಬಸವ, ಅಂಬೇಡ್ಕರರ ಜೊತೆ ಸತೀಶ ಜಾರಕಿಹೊಳಿ ಅವರು ದಾರಿದೀಪವಾಗಿದ್ದಾರೆ ಎಂದು ಕಲ್ಲಪ್ಪ ಮೇಲಗೀರಿ ಹೇಳುತ್ತಾರೆ.