ಬೆಳಗಾವಿ ಗಡಿಗೆ ನುಗ್ಗಲು ಯತ್ನಿಸಿದ ಮಹಾ ಪುಂಡರನ್ನು ತಡೆದ ಪೊಲೀಸರು : ಬೀದಿಯಲ್ಲಿ ಕುಳಿತು ಹೈಡ್ರಾಮಾ ಮಾಡಿ ವಾಪಸ್ಸಾದರು
ಬೆಳಗಾವಿ : ಕನ್ನಡ ರಾಜ್ಯೋತ್ಸವ ವಿರುದ್ಧವಾಗಿ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಆಚರಣೆ ಮಾಡುವ ಕರಾಳ ದಿನಕ್ಕೆ ಆಗಮಿಸಲು ಬೆಳಗಾವಿಯ ಗಡಿ ಪ್ರವೇಶಿಸಲು ಆಗಮಿಸಿದ್ದ ಶಿವಸೇನೆ ಪುಂಡರನ್ನು ನಿಪ್ಪಾಣಿ ಪೊಲೀಸರು ತಡೆದಿದ್ದು ಶಿವಸೇನೆ ಶಿವನೇನೆ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಹಾರಾಷ್ಟ್ರ ಕೆಲವರಿಗೆ ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧ ಹಾಕಿ ಆದೇಶ ಹೊರಡಿಸಿದ್ದರು.
ಆದರೆ ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದ ಗಡಿಯಿಂದ ರಾಜ್ಯದ ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಕ್ಕೆ ಮುಂದಾಗಿದ್ದ ಕೊಲ್ಲಾಪುರ ಜಿಲ್ಲಾ ಉದ್ದವ್ ಠಾಕ್ರೆ ಬಣದ ಶಿವಸೇನಾ ಅಧ್ಯಕ್ಷ ವಿಜಯ್ ದೇವಣೆ ಸೇರಿ 50ಕ್ಕೂ ಹೆಚ್ಚು ಪುಂಡರು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆಯಲಾದ ಶಿವಸೇನಾ ಪುಂಡರನ್ನು ಪೊಲೀಸ್ ವಾಹನದಲ್ಲಿ ವಾಪಸ್ ಗಡಿಗೆ ಹೊಂದಿಕೊಂಡಿರುವ ಕಾಗಲ್ ಪಟ್ಟಣಕ್ಕೆ ಕರೆದುಕೊಂಡು ಮಹಾರಾಷ್ಟ್ರ ಪೊಲೀಸರು ತೆರಳಿದ್ದಾರೆ.
ಗಡಿ ವಿವಾದವನ್ನು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಶಿವಸೇನೆ ಉದ್ಧವ್ ಠಾಕ್ರೆ ಬಣ ಯತ್ನ ಮಾಡುತ್ತಿದ್ದು, ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಶಿವಸೇನಾ ಪುಂಡರು ಅರ್ಧ ಗಂಟೆ ಹೈಡ್ರಾಮಾ ಮಾಡುವದು ಚಾಳಿಯಾಗಿ ಬಿಟ್ಟಿದೆ.
ಅದೇ ರೀತಿ ಬುಧವಾರ ಬೆಳಿಗ್ಗೆ ಸಹ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಅರ್ಧಗಂಟೆ ಕಾಲ ಶಿವಸೇನೆ ಪುಂಡರ ಹೈಡ್ರಾಮ ಮಾಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಯ ರಾಜ್ಯದ ಕೊಗನೊಳ್ಳಿ ಹೊರವಲಯದಲ್ಲಿ ಹೈಡ್ರಾಮಾ ನಡೆಸಲಾಯಿತು.
ಮಹಾರಾಷ್ಟ್ರ ವ್ಯಾಪ್ತಿಯ ಗಡಿಯಲ್ಲೇ ಕುಳಿತು ಕರ್ನಾಟಕ ವಿರುದ್ಧ ಘೋಷಣೆ ಕೂಗಿ ಹೈಡ್ರಾಮಾ ಮಾಡಲಾಗಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ನಂತರ ಗಡಿಯನ್ನು ಪ್ರವೇಶಿಸಲು ಆಗದೆ ಗಡಿಯಲ್ಲೇ ಮುಖಭಂಗ ಅನುಭವಿಸಿ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಶಿವಸೇನೆ ಪುಂಡರು ವಾಪಸಾಗ್ಗಿದ್ದಾರೆ.