ಕಾರವಾರ

ಮೀಟರ್ ಬಡ್ಡಿ ದಂಧೆಗೆ ಪೊಲೀಸರ ಕಡಿವಾಣ: ಮಂಡಗೋಡಿನಲ್ಲಿ ಜನರಿಗೆ ನೆಮ್ಮದಿ

ಮೀಟರ್ ಬಡ್ಡಿ ದಂಧೆಗೆ ಪೊಲೀಸರ ಕಡಿವಾಣ: ಮಂಡಗೋಡಿನಲ್ಲಿ ಜನರಿಗೆ ನೆಮ್ಮದಿ

 

ಮಂಡಗೋಡ, 19: ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕರ ನೆಮ್ಮದಿ ಕೆಡಿಸಿದ್ದ ಮೀಟರ್ ಬಡ್ಡಿ ದಂಧೆ, ರೌಡಿಸಂ ಹಾಗೂ ಪೊಲೀಸ್ ಠಾಣೆಯಲ್ಲಿದ್ದ ಮಧ್ಯವರ್ತಿಗಳ ಹಾವಳಿಗೆ ಮಂಡಗೋಡ ಪೊಲೀಸರು ಕಡಿವಾಣ ಹಾಕಿದ್ದಾರೆ.  

ಬಡ್ಡಿ ದಂಧೆಕೋರರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿರುವ ಸಿಪಿಐ ರಮೇಶ್ ಹಾನಾಪುರ ಹಾಗೂ ಪಿಎಸ್‌ಐ ಮಂಜುನಾಥ ಗೌಡ ನೇತೃತ್ವದ ಪೊಲೀಸರು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ.  

ಮೀಟರ್ ಬಡ್ಡಿ ದಂಧೆಯಿಂದಾಗಿ ಸಾಲಗಾರರು ಭಯದ ವಾತಾವರಣದಲ್ಲಿ ಬದುಕುವಂತಾಗಿತ್ತು. ಸಾಲ ವಸೂಲಿಗೆ ಕಿರುಕುಳ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಪೊಲೀಸರ ಎಚ್ಚರಿಕೆ ಪರಿಣಾಮಕಾರಿಯಾಗಿದೆ. ಇದರಿಂದ ಬಡ್ಡಿ ದಂಧೆಕೋರರು ಹಾಗೂ ಅವರ ಹಿಂಬಾಲಕರಲ್ಲಿ ಆತಂಕ ಮೂಡಿದೆ.  

ಪೊಲೀಸರ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ತಾಲ್ಲೂಕಿನಲ್ಲಿ ಮತ್ತೆ ಶಾಂತಿ, ಸೌಹಾರ್ದತೆ ಹಾಗೂ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡುತ್ತಿದೆ. ಮಂಡಗೋಡ ಪೊಲೀಸ್ ಠಾಣೆಯ ಕಾರ್ಯವೈಖರಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.  

ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಕೂಡ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಿಪಿಐ ರಮೇಶ್ ಹಾನಾಪುರ ಹಾಗೂ ಪಿಎಸ್‌ಐ ಮಂಜುನಾಥ ಗೌಡ ಅವರ ತಂಡದ ಕಾರ್ಯಾಚರಣೆಯಿಂದ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಗೊಂಡಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ