ದೃಢತೆ, ಶೃದ್ಧೆ, ಕಠಿಣ ಶ್ರಮ ಜೀವನದಲ್ಲಿ ಯಶಸ್ವಿಗೆ ಕಾರಣ: ಡಾ.ಪ್ರಭುಗೌಡ ಬಿ.ಎಲ್
ಸಿಂದಗಿ23: ದೃಢತೆ, ಶೃದ್ಧೆ ಮತ್ತು ಕಠಿಣ ಶ್ರಮ ಜೀವನದಲ್ಲಿ ಯಶಸ್ವಿಗೆ ಕಾರಣವಾಗಿದೆ. ಈ ಜೀವನದ ನಮ್ಮ ವೃತ್ತಿಯಲ್ಲಿ ಸಾಮಾಜಿಕ ಸೇವೆ ಸಲ್ಲಿಸುವ ಸಂದರ್ಭ, ರೋಗಿಗಳು ಗುಣಮುಖರಾಗಿ ಹಾರೈಸುವ ಸಂದರ್ಭ ಸಿಗುವ ಆನಂದ ಬೇರಾವ ಸಂದರ್ಭದಲ್ಲಿ ಸಿಗುವುದಿಲ್ಲ ಎಂದು ವಿಜಯಪುರ ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್. ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಸುರಭಿ ಹೊಟೇಲ್ ಗಾರ್ಡನ್ನಲ್ಲಿ ತಾಲೂಕು ವೃತ್ತಿಪರ ವೈದ್ಯರ ಸಂಘದ ವತಿಯಿಂದ ಹಮ್ಮಿಕೊಂಡ ಪ್ರಶಸ್ತಿ ಪುರಸ್ಕೃತ ಕಾಯಕಯೋಗಿ ವೈದ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನೋತ್ತರವಾಗಿ ಅವರು ಮಾತನಾಡಿದರು.
ಸಮುದಾಯದಲ್ಲಿ ವೃತ್ತಿಯೊಂದಿಗೆ ಮಾಡುವ ಸಮಾಜ ಸೇವೆ ಸಂದರ್ಭದಲ್ಲಿ ಸಾಕಷ್ಟು ಕಠಿಣತೆ ಎದುರಾಗುತ್ತವೆ. ಅವುಗಳನ್ನು ಎದುರಿಸುವ ಮೂಲಕ ಸೇವೆ ಮುಂದುವರೆಸಬೇಕು. ನೇತ್ರ ತಜ್ಞರಾದ ಡಾ.ಎಂ.ಸಿ. ಮೋದಿ ಮತ್ತು ಡಾ.ಎಂ.ಎಂ. ಜೋಶಿ ಅವರ ಪ್ರೇರಣೆಯಿಂದ ವಿಜಯಪುರದಲ್ಲಿ 2001ರಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಪ್ರಾರಂಭಿಸಿದೆ. ನನ್ನ ಸೇವೆಯಲ್ಲಿ ಧರ್ಮಪತ್ನಿ ಡಾ.ಮಾಲನಿ ಅವರ ಸಹಕಾರ ಅನನ್ಯ ಎಂದು ಹೇಳಿದರು.
ಪ್ರಾರಂಭದಲ್ಲಿ ನೇತ್ರ ಚಿಕಿತ್ಸೆ ನೀಡಲು ಪ್ರಾರಂಭಿಸಿದೆ. ಜೊತೆಗೆ ಉಚಿತ ಸೇವೆ ಸಲ್ಲಿಸಿದೆ. ಇಂದಿಗೆ ಅನುಗ್ರಹ ಕಣ್ಣಿನ ಆಸ್ಪತ್ರೆ ಸುಮಾರು 6ಲಕ್ಷ ಹೋರರೋಗಿಗಳಿಗೆ ಚಿಕಿತ್ಸೆ ನೀಡಿ, ಸುಮಾರು 80 ಸಾವಿರ ಕಣ್ಣಿನ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 25 ಸಾವಿರ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ಬಡವರ ಹಾಗೂ ನಿರ್ಗತಿಕರ ಕಣ್ಣಿನ ಚಿಕಿತ್ಸಿಗಾಗಿ ಅನುಗ್ರಹ ವ್ಹಿಜನ್ ಫೌಂಡೇಶನ್ ಟ್ರಸ್ಟ್ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಈ ಎಲ್ಲ ಸೇವೆಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ನೀಡಿರುವ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಸಿಕ್ಕಿರುವ ಖಷಿಗಿಂತ ಇಂದು ಸಿಂದಗಿ-ಆಲಮೇಲದ ನನ್ನ ವೈದ್ಯ ಮೀತ್ರರು ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಖಷಿಸಿಕ್ಕಿದೆ ಎಂದರು.
ಸನ್ಮಾನೋತ್ತರವಾಗಿ ಕಲ್ಯಾಣ ಕರ್ನಾಟಕ ವೈದ್ಯ ಪ್ರಶಸ್ತಿ ಪುರಸ್ಕೃತರಾದ ಆಲಮೇಲದ ಡಾ.ಸಂದೀಪ ಪಾಟೀಲ ಮಾತನಾಡಿ, ಸಮಾಜ ಸೇವೆಯಿಂದ ಫಲಿಸಿದ ಪ್ರಶಸ್ತಿಗಳು, ಸನ್ಮಾನಗಳು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ಸೇವೆಯಲ್ಲಿ ಸಹಕರಿಸಿದ ಎಲ್ಲ ವೈದ್ಯರಿಗೂ ಅಭಿನಂಧಿಸಿದರು.
ಐಎಂಎ ಅಧ್ಯಕ್ಷ ಡಾ.ಗೀರೀಶ ಕುಲಕರ್ಣಿ ಮಾತನಾಡಿ, ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರಭುಗೌಡ ಬಿ.ಎಲ್. ಹಾಗೂ ಆಲಮೇಲದ ಡಾ.ಸಂದೀಪ ಪಾಟೀಲ ಅವರ ಸಾಧನೆ ಮತ್ತು ವೈಧ್ಯಕೀಯ ಸಮಾಜ ಸೇವೆ ಕುರಿತು ಮಾತನಾಡಿದರು.
ತಾಲೂಕು ವೃತ್ತಿಪರ ವೈದ್ಯರ ಸಂಘದ ಅಧ್ಯಕ್ಷ ಡಾ.ಸಿ.ಎಂ. ಮನಗೂಳಿ (ಮುತ್ತು), ಕಾರ್ಯದರ್ಶಿ ಡಾ.ಸಂಗಮೇಶ ಪಾಟೀಲ, ಎಎಫ್ಐ ಅಧ್ಯಕ್ಷ ಶಿವಾನಂದ ಹೊಸಮನಿ ಅವರು ವೇದಿಕೆ ಮೇಲೆ ಇದ್ದರು.
ಈ ಸಂದರ್ಭದಲ್ಲಿ ತಾಲೂಕು ವೃತ್ತಿಪರ ವೈದ್ಯರ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಬಿ.ಎಲ್. ಹಾಗೂ ಕಲ್ಯಾಣ ಕರ್ನಾಟಕ ವೈದ್ಯ ಪ್ರಶಸ್ತಿ ಪುರಸ್ಕೃತರಾದ ಆಲಮೇಲದ ಡಾ.ಸಂದೀಪ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ. ಚಂದ್ರಶೇಖರ ಹಿರೇಗೌಡರ, ಡಾ.ಮಹಾಂತೇಶ ಹಿರೇಮಠ, ವಿಜಯಪುರದ ರೋಟರಿಯನ್ ಉದಯಕುಮಾರ ಯಾಳವಾರ ಅವರು ಮಾತನಾಡಿದರು.
ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ದತ್ತಾತ್ರೆಯ ಹೊಸಮಠ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಸೇರಿದಂತೆ ಸಿಂದಗಿ ಹಿ ಆಲಮೇಲ ತಾಲೂಕಿನ ವೃತ್ತಿಪರ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ.ಪ್ರಶಾಂತ ಬಮ್ಮಣ್ಣಿ ಪ್ರಾರ್ಥಿಸಿದರು. ಡಾ.ಗೀರೀಶ ಕುಲಕರ್ಣಿ ಸ್ವಾಗತಿದರು. ಡಾ. ಮಹೇಶ ಕುಲಕರ್ಣಿ ನಿರೂಪಿಸಿದರು. ಡಾ.ಸಂಜಯ ಪಾಟೀಲ ವಂದಿಸಿದರು.