ಬಳ್ಳಾರಿ

ಕಪ್ಪಗಲ್‌ನಲ್ಲಿ ಜಯಭೇರಿ ನಾಟಕಗಳ ಪ್ರದರ್ಶನ

ಕಪ್ಪಗಲ್‌ನಲ್ಲಿ ಜಯಭೇರಿ ನಾಟಕಗಳ ಪ್ರದರ್ಶನ

ಬಳ್ಳಾರಿ 04:  ಸಮೀಪದ ಕಪ್ಪಗಲ್ಲು ಗ್ರಾಮದಲ್ಲಿ ಇದೇ ಸೆಪ್ಟೆಂಬರ್ 5 ರಿಂದ 8ರವರೆಗೆ ನಾಲ್ಕು ದಿನಗಳ “ಕಪ್ಪಗಲ್ಲು ನಾಟಕೋತ್ಸವ”ನ್ನು ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ರಂಗತೋರಣ ಸಂಸ್ಥೆ ಹಮ್ಮಿಕೊಂಡಿದೆ. 

ಗ್ರಾಮಸ್ಥರೇ ಯಾರ ಸಹಾಯವಿಲ್ಲದೇ ಸ್ವಹಿತಾಸಕ್ತಿಯಿಂದ ಪ್ರತಿ ವರ್ಷ ನಾಟಕಗಳನ್ನು ಪ್ರದರ್ಶಿಸುತ್ತಾ ಇಂದಿಗೂ ನಾಟಕಗಳು ತಮ್ಮ ಆಕರ್ಷಣೆಯನ್ನು ಉಳಿಸಿಕೊಂಡಿರುವುದನ್ನು ಶ್ಲಾಘಿಸಲು ರಂಗತೋರಣ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ನಾಟಕಗಳ ಪ್ರದರ್ಶನ ಹಮ್ಮಿಕೊಳ್ಳುತ್ತಿದೆ. ಈ ಮುಂಚೆ ರಂಗತೋರಣದ ತಯಾರಿಯ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’, ಗಿರಿಜಾ ಕಲ್ಯಾಣ, ಸಂಜೆಹಾಡು, ದೂರದ ಹಕ್ಕಿ ಮೊದಲಾದ ನಾಟಕಗಳನ್ನು ‘ರಂಗಸವಾರಿ’ ಹೆಸರಿನಲ್ಲಿ ಹಲವಾರು ಗ್ರಾಮಗಳಲ್ಲಿ ಪ್ರದರ್ಶಿಸಿದೆ. ಅದರಂತೆ ಕಳೆದ ವರ್ಷವೂ ಕಪ್ಪಗಲ್ಲು ಗ್ರಾಮದಲ್ಲಿ 3 ದಿನಗಳ ನಾಟಕೋತ್ಸವ ಯಶಸ್ವಿಯಾಗಿ ಹಮ್ಮಿಕೊಂಡಿದ್ದನ್ನು ಸ್ಮರಿಸಬಹುದು. 

ಈ ಸಲ ನಾಡಿನ ಹೆಸರಾಂತ ಸಂಸ್ಥೆಯಾದ ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ನಾಟಕ ಕಂಪನಿ ಪಂ.ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದ ಅತ್ಯಂತ ಜನಪ್ರಿಯ ಹಾಗೂ ಜಯಭೇರಿಯ ನಾಟಕಗಳನ್ನು ಕಪ್ಪಗಲ್ಲು ಗ್ರಾಮದಲ್ಲಿ ಪ್ರದರ್ಶಿಸಲಾಗುವುದು ಜೊತೆಗೆ ನಮ್ಮದೇ ಜಿಲ್ಲೆಯ ಯುವನಟ ನಿರ್ದೇಶಕ ಸಿರಿಗೇರಿ ಮಂಜುನಾಥ ಅವರ ಧಾತ್ರಿ ರಂಗಸಂಸ್ಥೆಯ ನಗೆನಾಟಕವೂ ಪ್ರದರ್ಶನವಾಗಲಿದೆ. 

ಗ್ರಾಮದ ಬಯಲು ರಂಗಮಂದಿರ ಇತ್ತೀಚೆಗೆ ನವೀಕೃತಗೊಂಡಿದ್ದು ನಮ್ಮ ನಾಟಕೋತ್ಸವಕ್ಕೆ ಅನುಕೂಲವಾಗುವಂತೆ ವಿಶಾಲ ರಂಗಸ್ಥಳವನ್ನು ನಾಡಿನ ಹೆಸರಾಂತ ರಂಗಕರ್ಮಿ ಶೇಖ್ ಮಾಸ್ತರ ಅವರ ದೂರದ ವಿಜಯಪುರದ ಕಂಪನಿ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲು ಇವರು ರಂಗತೋರಣಕ್ಕಾಗಿ ನಿರ್ಮಿಸಿಕೊಡಲಿರುವುದು ಗಮನಾರ್ಹ. 

ಕಪ್ಪಗಲ್ಲು ಗ್ರಾಮದ ಬಯಲು ರಂಗಮಂದಿರದಲ್ಲಿ ಇದೇ ದಿನಾಂಕ ಸೆ. 5ರಂದು ಗುರುವಾರ ಸಂಜೆ 6 ಗಂಟೆಗೆ ನಡೆಯಲಿರುವ ‘ಕಪ್ಪಗಲ್ಲು ನಾಟಕೋತ್ಸವ’ವನ್ನು ನಾಡಿನ ಹೆಮ್ಮೆಯ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿಯವರು ಉದ್ಘಾಟಿಸಲಿದ್ದು ಅಂದು ಕಪ್ಪಗಲ್ಲು ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಅಂದು ಧಾತ್ರಿ ರಂಗ ಸಂಸ್ಥೆ ಸಿರಿಗೇರಿಯ ಜನಪ್ರಿಯ ನಗೆನಾಟಕ ‘ಶ್ರೀಕೃಷ್ಣ ಸಂಧಾನ’ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ಎ.ಎನ್‌. ಅಶ್ವಥ್ ಅವರ ರಚನೆಯ ಈ ನಾಟಕವನ್ನು ದಾವಣಗೆರೆಯ ಹೆಚ್‌.ಎನ್‌.ಭೀಮೇಶ ಅವರು ನಿರ್ದೇಶಿಸಿದ್ದಾರೆ. ನಾಟಕವನ್ನು ಕಲಿಯಲೇ ಬೇಕೆನ್ನುವ ಉತ್ಸಾಹದ ಗ್ರಾಮೀಣ ಯುವಕರಿಂದ ನಾಟಕದ ಮಾಸ್ತರು ಪಡುವ ಪಜೀತಿಯನ್ನು ನಾಟಕ ಬಿಂಬಿಸಲಿದೆ.  

ಎರಡನೇ ದಿನ ಸೆಪ್ಟೆಂಬರ್ 6ರಂದು ಶುಕ್ರವಾರ ‘ಗಡಗಿ ಜ್ವಾಕಿ ತಂಗಿ’ ನಾಟಕ ಪ್ರದರ್ಶನವಿದೆ. ಈ ನಾಟಕವನ್ನು ರಚಿಸಿ ನಿರ್ದೇಶಿಸಿದವರು ಮಹದೇವ ಹೊಸೂರು ಅವರು ಈ ನಾಟಕಕ್ಕೆ ಗ್ರಾಮದ ಮುಖಂಡರಾದ ಬಿ.ಕಟ್ಟೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಅರಿಕೇರಿ ಬಸವನಗೌಡ, ಹಾಗೂ ವೆಂಕಟರಮಣ ಅವರುಗಳು ಚಾಲನೆ ನೀಡಲಿದ್ದಾರೆ. 

ಮೂರನೇ ದಿನ ಸೆಪ್ಟೆಂಬರ್ 7 ರಂದು ಶನಿವಾರ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕವಿದೆ. ಪಂಡಿತ ನಲವಡಿ ಶ್ರೀಕಂಠಶಾಸ್ತ್ರಿಗಳ ಈ ನಾಟಕ ಗದಗ ಕಂಪನಿಯ ಅಚ್ಚುಮೆಚ್ಚಿನ ನಾಟಕವಾಗಿದ್ದು ಭಕ್ತಿ ಪ್ರಧಾನ ಹಾಗೂ ನೀತಿ ಪ್ರಧಾನ ನಾಟಕವಾಗಿದೆ. ಇಂದಿನ ನಾಟಕೋತ್ಸವದ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಕೆ.ಎ.ರಾಮಲಿಂಗಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಾಲ್ತೂರ್ ರಂಜಾನ್‌ಸಾಬ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಗಾದಿಲಿಂಗಪ್ಪ ಹಾಗೂ ಈಶ್ವರಮ್ಮ ಭೂಷಪ್ಪ ರವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

ಕೊನೆ ದಿನ ಸೆಪ್ಟೆಂಬರ್ 8 ರಂದು ಭಾನುವಾರ ಗದುಗಿನ ಪುಟ್ಟರಾಜ ಗವಾಯಿಗಳ ಸಂಸ್ಥೆಯ ಮತ್ತೊಂದು ಜಯಭೇರಿ ನಾಟಕ ‘ಮುದುಕನ ಮದುವೆ’ ನಡೆಯಲಿದೆ. ಈ ನಾಟಕವನ್ನು ಸಂಪತ್ತಿಗೆ ಸವಾಲ್ ಖ್ಯಾತಿಯ ಪಿ.ಬಿ.ಧುತ್ತರಾಗಿ ರಚಿಸಿದ್ದು ಮಹಾದೇವ ಹೊಸೂರು ನಿರ್ದೇಶಿಸಿದ್ದಾರೆ. ಕೊನೆಯ ದಿನದ ಸಮಾರೋಪದಲ್ಲಿ ಪಿಂಜಾರ್ ಸಮಾಜದ ರಾಜ್ಯ ಉಪಾಧ್ಯಕ್ಷ ದಾದಾ ಖಲಂದರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ್ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರಗೌಡ ಭಾಗವಹಿಸಲಿದ್ದಾರೆ. 


ಸುದ್ದಿ ಓದಿ