ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಚಿತ್ರಕಲಾ ಸ್ಪರ್ಧೆ

ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಚಿತ್ರಕಲಾ ಸ್ಪರ್ಧೆ Painting competition at Amrutha Varshini Vidyalaya

ಲೋಕದರ್ಶನ ವರದಿ 

ರಾಣಿಬೆನ್ನೂರ 27 : ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಏಕಾಗ್ರತೆ ಹಾಗೂ ಸಾಮಾಜಿಕ ಜಾಗೃತಿಯನ್ನು ಬೆಳೆಸುವ ಉದ್ದೇಶದಿಂದ ತಾಲೂಕಿನ ಕುಮಾರಪಟ್ಟಣಂ ಗ್ರಾಮದ  ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಗುರುವಾರ ಚಿತ್ರಕಲೆ ಹಾಗೂ ಬಣ್ಣ ಹಚ್ಚುವ ಸ್ಪರ್ಧೆ ನಡೆಯಿತು.  

4ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕನಸಿನ ಮನೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಕಾಳಜಿ ವಿಷಯಗಳನ್ನು ನೀಡಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಕಲ್ಪನಾ ಶಕ್ತಿ ಹಾಗೂ ಕಲಾತ್ಮಕ ಪ್ರತಿಭೆಯನ್ನು ಚಿತ್ರಗಳ ಮೂಲಕ ಅನಾವರಣಗೊಳಿಸಿದರು.  

ಕಿರಿಯ ವಿದ್ಯಾರ್ಥಿಗಳು ಕನಸಿನ ಮನೆಯ ಚಿತ್ರಗಳನ್ನು ಬಿಡಿಸಿದರೆ, ಹಿರಿಯ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಭೂಮಿಯ ರಕ್ಷಣೆ ಮತ್ತು ಸಾಮಾಜಿಕ ಕಳಕಳಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಿ ಗಮನ ಸೆಳೆದರು. ಕೆಲ ವಿದ್ಯಾರ್ಥಿಗಳು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಸಮಾನತೆ, ಸಹಕಾರ ಹಾಗೂ ಶಿಕ್ಷಣದ ಮಹತ್ವವನ್ನು ತಮ್ಮ ಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ಮೂಡಿಸಿದರು. 

ಇಂತಹ ಸ್ಪರ್ಧೆಗಳು ಮಕ್ಕಳ ಕೈಚಳಕವನ್ನು ವೃದ್ಧಿಸುವುದರ ಜತೆಗೆ ಏಕಾಗ್ರತೆ ಹೆಚ್ಚಿಸಲು, ಒತ್ತಡ ನಿವಾರಣೆಗೆ ಹಾಗೂ ಸೌಂದರ್ಯ ಪ್ರಜ್ಞೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಮುಖ್ಯಶಿಕ್ಷಕ ಪಿ.ಕೆ. ಪ್ರಕಾಶರಾವ್ ಹೇಳಿದರು.  ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿತು.