ಹಗರಿಬೊಮ್ಮನಹಳ್ಳಿ

ಡಿಗ್ರಿ ಕಾಲೇಜು ಆರಂಭಿಸಲು ತಂಬ್ರಹಳ್ಳಿಯಿಂದ ವಿಜಯನಗರಕ್ಕೆ ಪಾದಯಾತ್ರೆ

ಡಿಗ್ರಿ ಕಾಲೇಜು ಆರಂಭಿಸಲು ತಂಬ್ರಹಳ್ಳಿಯಿಂದ ವಿಜಯನಗರಕ್ಕೆ ಪಾದಯಾತ್ರೆ

ಹಗರಿಬೊಮ್ಮನಹಳ್ಳಿ 06: ತಾಲೂಕಿನ ತಂಬ್ರಹಳ್ಳಿಯಲ್ಲಿ ಪದವಿ ಕಾಲೇಜು ಹಾಗೂ ಎರಡನೇ ಹಂತದ ಏತ ನೀರಾವರಿ ಯೋಜನೆಗೆ ಅನುದಾನಕ್ಕೆ ಒತ್ತಾಯಿಸಿ ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಶೀಘ್ರದಲ್ಲಿ ರೈತರು, ಕಾಲೇಜು ವಿದ್ಯಾರ್ಥಿಗಳು, ಗ್ರಾಮದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಪಕ್ಷಾತೀತವಾಗಿ ಮುಖಂಡರುಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ತಿಳಿಸಿದರು. 

ತಾಲೂಕಿನ ತಂಬ್ರಹಳ್ಳಿ ಕೊಟ್ಟೂರೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಎರಡನೇ ಹಂತದ ನೀರಾವರಿ ಯೋಜನೆ ಜಾರಿಗೆ ಮತ್ತು ಡಿಗ್ರಿ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸಲು ನಡೆಸಿದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು. ಈಗಾಗಲೇ ತಂಬ್ರಹಳ್ಳಿ ಗ್ರಾಮದಿಂದ ಹಬೊಹಳ್ಳಿ ಪಟ್ಟಣಕ್ಕೆ ಪಾದಯಾತ್ರೆಯ ಮೂಲಕ ಹೋಗಿ ಶಾಸಕರಿಗೆ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜವಿಲ್ಲದಂತಾಗಿದೆ.  ಡಿಗ್ರಿ ಕಾಲೇಜು ಆರಂಭಿಸಲು ಬೌಗೋಳಿಕವಾಗಿ ತಂಬ್ರಹಳ್ಳಿ ಗ್ರಾಮ ಸೂಕ್ತವಾಗಿದ್ದು, ಕೂಡಲೇ ಸರಕಾರ ಕಾಲೇಜು ಪ್ರಾರಂಭಕ್ಕೆ ಅವಕಾಶ ನೀಡಬೇಕು. ಸರಕಾರ ಅವಕಾಶ ನೀಡಿದ್ದನ್ನು ಶಿಕ್ಷಣ ಜಂಟಿ ನಿರ್ದೇಶಕರು ತಿರಸ್ಕಾರ ಮಾಡಿರುವುದು ಬೇಸರ ತರಿಸಿದೆ. ಇಲ್ಲೀಯ ಹೆಣ್ಣುಮಕ್ಕಳ ಶಿಕ್ಷಣವನ್ನು ಸರಕಾರವೇ ಮೊಟಕುಗೊಳಿಸಿದಂತಾಗುತ್ತದೆ. ಕೂಡಲೇ ಸರಕಾರ ತಂಬ್ರಹಳ್ಳಿಯಲ್ಲಿ ಡಿಗ್ರಿ ಕಾಲೇಜು ಆರಂಭಿಸಿ ಪಿಯುಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ನೀಡಬೇಕು. ಕಾಲೇಜು ಮಕ್ಕಳು ಸಾಕಷ್ಟು ಬಾರಿ ಪತ್ರ ಚಳುವಳಿ ಮೂಲಕ ಸಕಕಾರವನ್ನು ಎಚ್ಚರಿಸಿದರೂ ಕೂಡ ನಿರ್ಲಕ್ಷ್ಯ ಮಾಡುತ್ತಿರುವುದು ಬೇಸರ ತರಿಸಿದೆ. ಈ ಎರಡು ಪ್ರಮುಖ ಯೋಜನೆಗಳು ಜಾರಿಗೆ ಒತ್ತಾಯಿಸಿ ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಆಗಷ್ಟ್‌ 17ರಂದು ಬೃಹತ್ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು. ಪಾದಯಾತ್ರೆಯ ಕಾರ್ಯಕ್ರಮದ ರೂಪುರೇಷ ಮಾಡಲು ದಿ.13ರಂದು ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು. 

ಗ್ರಾ.ಪಂ.ಸದಸ್ಯ ಸಂಡೂರು ಮೆಹಬೂಬ್ ಮಾತನಾಡಿ, ಗ್ರಾಮಸ್ಥರು ಈ ಎರಡು ಯೋಜನೆಗಳ ಜಾರಿಗೆ ಸಾಕಷ್ಟು ಹೋರಾಟ ಮಾಡಿ ಒತ್ತಾಯಿಸಿದರು ಕೂಡ ಸರಕಾರ ನಿರ್ಲಕ್ಷ್ಯತೆ ತೋರುತ್ತಿದೆ. ಈ ಸರಕಾರ ದಪ್ಪ ಚರ್ಮದ ಸರಕಾರ, ಇದನ್ನು ಹೋರಾಟದ ಮೂಲಕ ಎಚ್ಚರಿಸಬೇಕಿದೆ. ಗ್ರಾಮದ ಪ್ರತಿಯೊಬ್ಬರು ಪಕ್ಷಾತೀತವಾಗಿ ಪಾದಯಾತ್ರೆಯ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ನಿವೃತ್ತ ಇಒ ವೆಂಕೋಬಪ್ಪ, ಮುಖಂಡರಾದ ಪಟ್ಟಣಶೆಟ್ಟಿ ಸುರೇಶ, ಮಂಜುನಾಥ, ಹೊಟ್ಟಿ ಲೇಪಾಕ್ಷಪ್ಪ ಮಾತನಾಡಿದರು. 

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ದೊಡ್ಡಬಸಪ್ಪ, ಸದಸ್ಯರಾದ ಮೈಲಾರ ಶಿವಕುಮಾರ, ಬಸಲಿಂಗನಗೌಡ, ಮುಖಂಡರಾದ ಗಂಗಾಧಗೌಡ, ಗೌರಜ್ಜನವರ ಬಸವರಾಜಪ್ಪ, ಮೂಲಿಮನಿ ರವಿಪ್ರಸಾದ್, ನಾಗಲಾಪುರ ವೀರಣ್ಣ, ಪಿ.ಕೊಟ್ರೇಶ, ಗೌರಜ್ಜನವರ ಗೀರೀಶ್, ಸೊಬಟಿ ಹರೀಶ್, ಬಾಳಿಕಾಯಿ ವೀರೇಶ, ಪಟ್ಟಣಶೆಟ್ಟಿ ವೀರೇಶ, ಗಂಗಾವತಿ ಅಜೀಜ್, ಬಂಡಿ ತೋಟಪ್ಪ, ಸಪ್ಪರದ ಪಂಪಾಪತಿ, ಕನಿಕೇರಿ ಕೊಟ್ರೇಶ, ಬಳಿಗಾರ ವೀರೇಶ್ ಇತರರಿದ್ದರು. 


ಸುದ್ದಿ ಓದಿ