ಪಿಎಸೈ ವಿಶೇಷ ಕಾಳಜಿ: ಸಿಸಿ ಕ್ಯಾಮರಾ ದುರಸ್ತಿ
ಮುದ್ದೇಬಿಹಾಳ: ಪಟ್ಟಣದ ಸಾರ್ವಜನಿಕರು ಲಕ್ಷಾಂತರ ರೂ ದೇಣಿಗೆ ಸಂಗ್ರಹಿಸಿ ಪೊಲೀಸ್ ಇಲಾಖೆಗೆ ಅಪರಾಧ ತಡೆಗಟ್ಟಲು ಸಹಕಾರಿಯಾಗಲಿ ಎಂದು ಅಳವಡಿಸಿದ್ದ ಸಿಸಿ ಕ್ಯಾಮರಾ ದುರಸ್ತಿಗೆ ನೂತನ ಪಿಎಸೈ ಆರೀಫ ಮುಷಾಪುರಿ ಕ್ರಮ ಕೈಕೊಳ್ಳುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 2-3 ವರ್ಷಗಳ ಹಿಂದೆ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಇಡೀ ಪಟ್ಟಣವನ್ನು ಪೊಲೀಸರ ಕಣ್ಗಾವಲಿಗೆ ವಹಿಸಿಕೊಡಲಾಗಿತ್ತು. ಇದರಿಂದ ಅಪರಾಧ ಸಂಖ್ಯೆಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿತ್ತು. ಪೊಲೀಸರ ಶ್ರಮದಾಯಕ ಕೆಲಸವೂ ಹಗುರವಾಗಿತ್ತು. ಆದರೆ ಕೆಲ ತಿಂಗಳ ಹಿಂದೆ ಪಟ್ಟಣದಲ್ಲಿ ರಸ್ತೆ ದುರಸ್ತಿ ಕಾರಣದಿಂದಾಗಿ ಅಲ್ಲಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಕಾರ್ಯನಿರ್ವಹಣೆ ಬಂದ್ ಆಗಿತ್ತು. ಅಲ್ಲಲ್ಲಿ ಕೇಬಲ್ಗಳು ತುಂಡಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ನೂತನ ಪಿಎಸ್ಐ ಆರೀಫ ಅವರು ಸಿಸಿ ಕ್ಯಾಮರಾ ಅಳವಡಿಸಲು ಕಾರಣರಾದ ಪ್ರಮುಖರನ್ನು ಸಂಪರ್ಕಿಸಿ, ಇದಕ್ಕೆ ಸಂಬಂಧಿಸಿದ ತಂತ್ರಜ್ಞರೊಂದಿಗೆ ಮಾತನಾಡಿ ಎಲ್ಲೆಲ್ಲಿ ಸಿಸಿ ಕ್ಯಾಮರಾ ಬಂದ್ ಆಗಿವೆಯೋ ಅವೆಲ್ಲವನ್ನೂ ದುರಸ್ತಿ ಪಡಿಸಿ ಮೊದಲಿನಂತೆ ಎಲ್ಲವೂ ಸರಿ ಹೋಗಲು ಕ್ರಮ ಕೈಕೊಂಡರು. ಇದರಿಂದಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿರುವ ವಿಶಾಲ ಟಿವಿ ಪರದೆಯಲ್ಲಿ ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳ ದೃಶ್ಯ ನಿಚ್ಚಳವಾಗಿ, ರಾತ್ರಿ ಸಮಯದಲ್ಲೂ ನಿಖರವಾಗಿ ಕಾಣುವಂಥ ವ್ಯವಸ್ಥೆ ಮತ್ತೊಮ್ಮೆ ಜಾರಿಗೊಂಡಂತಾಗಿದೆ. ಪಿಎಸೈ ಆರೀಫ ಅವರ ಸಮಾಜ ಮುಖಿ ಕಾರ್ಯವನ್ನು ಪಟ್ಟಣದ ನಾಗರಿಕರು ಪ್ರಶಂಶಿಸಿದ್ದಾರೆ.