ಜಸರಾ ಕ್ರೀಡಾಕೂಟದಲ್ಲಿ ಗಂಗಾವತಿ ಕ್ರೀಡಾಪಟುಗಳ ಅದ್ಭುತ ಸಾಧನೆ
ಗಂಗಾವತಿ 03: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯನಗರ ಮತ್ತು ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಗಂಗಾವತಿ ತಾಲೂಕಿನ ಕ್ರೀಡಾಪಟುಗಳು ವುಶೂ ಹಾಗೂ ಟೆಕ್ವಾಂಡೋ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯ ಮಟ್ಟದ ವಿಶೇಷ ಕ್ರೀಡೆಗಳ ಮುಖ್ಯ ತರಬೇತುದಾರ ಬಾಬುಸಾಬ ಅವರ ಮಾರ್ಗದರ್ಶನದಲ್ಲಿ ಬೇತಲ್ ಸಮೂಹ ಶಿಕ್ಷಣ ಸಂಸ್ಥೆ ಸೇರಿದಂತೆ ಗಂಗಾವತಿಯ ವಿವಿಧ ಶಿಕ್ಷಣ ಸಂಸ್ಥೆಗಳ ಕ್ರೀಡಾಪಟುಗಳು ವುಶೂ ಮತ್ತು ಟೆಕ್ವಾಂಡೋ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಮಹಾವಿದ್ಯಾಲಯದ 12 ವಿದ್ಯಾರ್ಥಿಗಳು ಸೇರಿದಂತೆ ದೆಹಲಿ ಪಬ್ಲಿಕ್ ಶಾಲೆ, ಸರೋಜಮ್ಮ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹೆಬೂಬನಗರ, ವೈ.ಜೆ.ಆರ್. ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಭಾಗ್ಯನಗರ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಒಟ್ಟು 21 ಕ್ರೀಡಾಪಟುಗಳು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.ಕಲಬುರಗಿ ವಿಭಾಗ ಮಟ್ಟದ ವುಶೂ ಮತ್ತು ಟೆಕ್ವಾಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಒಟ್ಟು 21 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ 11 ಪ್ರಥಮ, 06 ದ್ವಿತೀಯ ಹಾಗೂ 04 ತೃತೀಯ ಸ್ಥಾನಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.