ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಏಳ್ಗೆಗಾಗಿ ಶ್ರಮಿಸುವೆ: ಮಲ್ಲೇಶಪ್ಪ.ವೈ
ಬಳ್ಳಾರಿ 29: ನಗರದಲ್ಲಿ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಮಲ್ಲೇಶಪ್ಪ.ವೈ ಅವರು ಆಯ್ಕೆಯಾಗಿ ಭಾನುವಾರ ಅಧಿಕಾರ ವಹಿಸಿಕೊಂಡರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಭಾನುವಾರ ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ನಿವೃತ್ತ ಜಿಲ್ಲಾಧ್ಯಾಕ್ಷ ಶಿವಪ್ಪ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಬಹುತೇಕ ಎಲ್ಲಾ ಕಚೇರಿಗಳಲ್ಲಿ ಹೊರಗುತ್ತಿಗೆ ವಾಹನ ಚಾಲಕರಿದ್ದು, ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ದೊರೆಯುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು, ಬೆಳವಣಿಗೆ ಹೊಂದಬೇಕು ಎಂದು ಆಶಿಸಿದರು.ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಮಲ್ಲೇಶಪ್ಪ.ವೈ ಅವರು ಅಧಿಕಾರ ವಹಿಸಿಕೊಂಡು, ಬಳಿಕ ಮಾತನಾಡಿ, ನನ್ನನ್ನು ಗುರುತಿಸಿ ಸಂಘದ ಅಧಿಕಾರ ವಹಿಸಿದ್ದು, ಚಿರರುಣಿಯಾಗಿರುತ್ತೇನೆ. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವೆ. ಸಂಘದ ಬೆಳವಣಿಗೆಗೆ ಸದಾ ಸಿದ್ಧನಾಗಿರುವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.
ಬಳಿಕ ಸಂಘದ ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಹಾಲಿ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ವೇದಮೂರ್ತಿ, ಖಜಾಂಚಿ ಎಸ್.ಎ.ಕಬೀರ್ ಮತ್ತು ಹೊರಗುತ್ತಿಗೆ ಸರ್ಕಾರಿ ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಬಿ.ಪರಶುರಾಮ್, ಗೌರವಾಧ್ಯಕ್ಷ ವೆಂಕಟ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಅಂತೋನಿ ಪಾಲ್, ಖಜಾಂಚಿ ಶಿವು, ಸಂತೋಷ್ ಕುಮಾರ್, ಹಂಪಯ್ಯ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.