ಬಸವಾನಂದ ಶಿಶು ವಿಹಾರ ಶಾಲಾ ಮಕ್ಕಳಿಂದ ಶೈಕ್ಷಣಿಕ ಹೊರ ಸಂಚಾರ !
ವಿವಿಧ ಭಕ್ಷ್ಯ ಭೋಜನ ಸವಿದು ದೇವಸ್ಥಾನದಲ್ಲಿ ನಕ್ಕು ನಲಿದ ಮಕ್ಕಳು
ಮಹಾಲಿಂಗಪುರ 29 : ಬಸವಾನಂದ ಶಿಶು ವಿಹಾರ ಶಾಲೆಯ ಎಲ್ಕೆಜಿ ಮತ್ತು ಯುಕೆಜಿ ವಿಭಾಗದ ಮಕ್ಕಳು ಶಿಕ್ಷಣ ಇಲಾಖೆಯ ನಿಯಮದಂತೆ ಬುಧವಾರ ಒಂದು ದಿವಸದ ಶೈಕ್ಷಣಿಕ ಹೊರ ಸಂಚಾರ ನಡೆಸಿದರು.
ಎರಡೂ ತರಗತಿಯ ಸುಮಾರು 170 ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಭಾಗವಹಿಸಿ 13ನೇ ವಾರ್ಡ್ ಕೆಂಗೇರಿಮಡ್ಡಿ ಬಡಾವಣೆಯ ನೂತನವಾಗಿ ನಿರ್ಮಿಸಿರುವ ಶಿವಸಾಯಿ ಸರೋವರಕ್ಕೆ ಭೇಟಿ ನೀಡಿ ಅಲ್ಲಿರುವ ಶಿವನ ಮೂರ್ತಿ ವೀಕ್ಷಿಸಿ ಪರಿಸರದ ಗೋಡೆಗಳ ಮೇಲೆ ಬರೆದ ಚಿತ್ರ ಕಲೆ (ಪ್ರಾಣಿ ಪಕ್ಷಿಗಳ) ಬಗ್ಗೆ ಸ್ವತಃ ಅವರೆ ವಿವರಣೆ ನೀಡಿದರು.
ನಂತರ ಅಲ್ಲಿಂದ ಬಡಾವಣೆಯ ಸಾಯಿ ಬಾಬಾ ಮತ್ತು ಭಗೀರಥ ದೇವಸ್ಥಾನಕ್ಕೆ ಆಗಮಿಸಿ ನಮಸ್ಕರಿಸಿ ಮುಂದಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅಣಿಯಾದರು.ಭಗೀರಥ ಆವರಣದಲ್ಲಿ ಮಕ್ಕಳೆಲ್ಲ ಓಡಾಡಿ ಪರಸ್ಪರ ನಕ್ಕು ನಲಿದು, ತಾವು ಮನೆಯಿಂದ ತಂದ ವಿವಿಧ ತರಹದ ಭೋಜನ ಸವಿದು ಮಧ್ಯಾಹ್ನದ ವಿಶ್ರಾಂತಿಗೆ ಜಾರಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಕೆ ಗಿಂಡೆ ಮಾತನಾಡಿ, ನಿರಂತರ ನಾಲ್ಕು ಗೋಡೆಗಳ ಮಧ್ಯೆ ಇದ್ದು ಬೇಸತ್ತ ಮಕ್ಕಳಿಗೆ ಹೊರ ಜಗತ್ತಿನ ಹಾಗೂ ಬೌದ್ಧಿಕ ವಿಕಸನ ಮೂಡಿಸುವುದೆ ಶಿಕ್ಷಣ ಇಲಾಖೆಯ ಕಳಕಳಿಯಾಗಿದೆ ಇದರಿಂದ ಮಕ್ಕಳ ಮನಸ್ಸು ಪ್ರಫುಲತೆ ಹೊಂದಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂದರು.
ಈ ಶೈಕ್ಷಣಿಕ ಹೊರ ಸಂಚಾರ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಶೇಖರ್ ಅಂಗಡಿ ಭಾಗವಹಿಸಿ ಮಕ್ಕಳ ಜೊತೆ ಕೆಲ ಕಾಲದವರೆಗೆ ಸಮಯ ಕಳೆದರು. ಸ್ಥಳೀಯರೂ ಸಹ ಮಕ್ಕಳ ಒಡನಾಟ ನೋಡಿ ಮಂದ ವಿಸ್ಮಿತರಾದರು.ನೇತೃತ್ವವನ್ನು ಮುಖ್ಯೋಪಾಧ್ಯಾಯರಾದ ಎಸ್ ಕೆ ಗಿಂಡೆ ಶಾಲೆಯ ಶಿಕ್ಷಕಿಯ ಎಸ್ ಎಸ್. ಕಡಪಟ್ಟಿ, ಎಚ್ ಜಿ. ಗಂಡಿ, ಕೆ ಎಸ್ ಜಕ್ಕಲಿ ಹಾಗೂ ಕೆ ವಿ.ಅಗಸರ ವಹಿಸಿದ್ದರು.