ನಮ್ಮದು ಬಸವಾದಿ ಶರಣರ ತತ್ವದ ರೀತಿ ನುಡಿದಂತೆ ನಡೆದ ಸರಕಾರ : ಕಾಂಗ್ರೆಸ್ ನ 5 ಗ್ಯಾರಂಟಿಗಳಿಂದ ರಾಜ್ಯದ ಜಿಡಿಪಿ ಹೆಚ್ವಲಿದೆ : ಸಿಎಂ ಸಿದ್ದರಾಮಯ್ಯ
ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಂದ ಎಲ್ಲ ವರ್ಗದ ಜನರಿಗೆ ಪ್ರತಿ ತಿಂಗಳು 4ರಿಂದ 5 ಸಾವಿರ ರೂ. ಉಳಿತಾಯವಾಗಲಿದೆ. ನಮ್ಮ ಐದು ಗ್ಯಾರಂಟಿಗಳಿಂದ ರಾಜ್ಯದ ಜಿಡಿಪಿ (ಆರ್ಥಿಕತೆ) ಹೆಚ್ಚಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮದು ಬಸವಾದಿ ಶರಣರ ತತ್ವದ ಮೇಲೆ ನಡೆದಿರುವ ಸರಕಾರ, ಶರಣರ ನಡೆದ ರೀತಿಯಲ್ಲಿ ನುಡಿದಂತೆ ನಡೆಯುತ್ತಿದ್ದೇವೆ.
ಭಾರತದ ಯಾವ ರಾಜ್ಯ ಸರಕಾರಗಳು ನಮ್ಮ ಗ್ಯಾರೆಂಟಿ ಅಂತಹ ಜನಪರ ಯೋಜನೆ ಜಾರಿಗೆ ತಂದಿಲ್ಲ. ಆದರೆ ನಮ್ಮ ಸರಕಾರ ನೀಡುತ್ತಿದೆ. ವರ್ಷದಲ್ಲಿ 32 ಸಾವಿರ ಕೋಟಿ ಜನರಿಗೆ ನೀಡುವ ಕಾರ್ಯಕ್ರಮ ಮಾಡಿದ್ದೇವೆ. ಬಿಜೆಪಿಯವರು ಮಾಡಿದ ಭ್ರಷ್ಟಾಚಾರ ನೋಡಿದರೆ ಬಿಜೆಪಿಯವರ ಆರೋಪದಿಂದ ಭೂತದ ಬಾಯಲ್ಲಿ ಭಗ್ವತ್ ಗೀತೆ ಎಂಬತಾಗಿದೆ ಎಂದು ಕುಟುಕಿದರು.

ಆದರೆ ನಮ್ಮ ಸರಕಾರದಲ್ಲಿ ಯಾವ ತಪ್ಪುಗಳು ಇಲ್ಲದಿರುವದು ಮತ್ತು ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯಾವ ವಿಷಯ ಸಿಗದ ಹಿನ್ನೆಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ನವರಿಗೆ ನಮ್ಮ ಐದು ಗ್ಯಾರಂಟಿ ಯೋಜನೆಯಿಂದ ಹೊಟ್ಟೆ ಉರಿ ಆಗುತ್ತಿದೆ ಎಂದು ದೂರಿದರು.
ನಾವು ಈ ಹಿಂದೆ ನೀಡಿರುವ ಭರವಸೆ ಗಳನ್ನು ಈಡೇರಿಸಿದ್ದೇವೆ. ಅದೇ ರೀತಿ ಈ ಬಾರಿ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ ಈ ಮೂರು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇನ್ನೊಂದು ಪ್ರಮುಖವಾದ ಗೃಹಲಕ್ಷ್ಮೀ ಯೋಜನೆ ಇದೇ ತಿಂಗಳು ಬೆಳಗಾವಿಯಿಂದಲೇ ಚಾಲನೆ ನೀಡುತ್ತಿದ್ದೇವೆ. ಯುವನಿಧಿ ಯೋಜನೆಯನ್ನು ಬರುವ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುದು ಎಂದು ನುಡಿದರು.

ಬಿಜೆಪಿಯಲ್ಲಿನ ದುರಾಡಳಿತ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಅದರ ವಿರುದ್ದ ನಮ್ಮ ಹೋರಾಟ ಇತ್ತು. ನಮ್ಮ ಗ್ಯಾರಂಟಿ ಯೋಜನೆಯಿಂದ ಬಿಜೆಪಿ ಜೆಡಿಎಸ್ ಪಕ್ಷ ಗಳಿಗೆ ಹೊಟ್ಟೆ ಉರಿ ಪ್ರಾರಂಭವಾಗಿದೆ. ಅದರಂತೆ ಶಾಸಕ ಸವದಿ ಆಯ್ಕೆ ಮಾಡಿ ಕ್ಷೇತ್ರದ ಜನ ಪ್ರೀತಿ ತೋರಿಸಿರುವ ಜನರಿಗೆ ಕೃತಜ್ಞತೆ ಹೇಳಿದರು. ಅಥಣಿ ಭಾಗಕ್ಕೆ ಬೇಕಾದ ಸೌಕರ್ಯಗಳ ಬಗ್ಗೆ ಶಾಸಕ ಸವದಿ ನನ್ನ ಮುಂದೆ ಇಟ್ಟಿರುವ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಿ ಕೊಡುವದಾಗಿ ಹೇಳಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸವದಿ ಆಯ್ಕೆ ಮಾಡಿ ಸಹಕಾರ ನೀಡಿದ ಈ ಭಾಗದ ಜನರ ಋಣ ತೀರಿಸಲು ನಾವು ಇಲ್ಲಿ ಬಂದಿದ್ದೇವೆ. ನಿಮ್ಮ ಕ್ಷೇತ್ರ, ಕಾಗೆ ಕ್ಷೆತ್ರ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಶೆಟ್ಟರ್ ಕ್ಷೇತ್ರ ಬಗ್ಗೆ ನಿಗಾ ವಹಿಸುತ್ತೇವೆ. ಈ ಭಾಗದ ನೀರಾವರಿ ಯೋಜನೆ ಸೇರಿ ಅನೇಕ ಬೇಡಿಕೆ ನಮ್ಮ ಮುಂದೆ ಇಟ್ಟಿದ್ದಾರೆ. ನಿಮಗೆ ಕೊಟ್ಟ ಮಾತನ್ನು ಈಡೇರಿಸಲು ಬದ್ದವಾಗಿದ್ದೇವೆ. ಭಾರತದ ಉದ್ದ ಅಗಲಕ್ಕು ನಮ್ಮ ಸರಕಾರ ಕೊಟ್ಟ ಯೋಜನೆ ಯಾಬ ಸರಕಾರಗಳು ನೀಡಿಲ್ಲ. ಟೀಕೆ ಟಿಪ್ಪನೆ ಕಿವಿಗೊಡದೆ ನಿಮ್ಮ ಕನಸು, ಜಿಲ್ಲೆಗೆ, ರಾಜ್ಯಕ್ಕೆ ಹೊಸ ರೂಪ ನೀಡಲು ಯೋಜನೆಗಳನ್ನು ರೂಪಿಸುತ್ತಾ ಇದ್ದೇವೆ ಎಂದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಅಥಣಿ ಭಾಗದಲ್ಲಿ ನೀರಾವರಿ ಯೋಜನೆಗಳು ಕೂಡಾ ನಡೆಯಬೇಕಿದೆ. ಅದನ್ನು ಸರಕಾರ ಪರಿಹರಿಸಲಿದೆ. ಈ ಹಿಂದೆ ನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಸರಕಾರ ಬೆಳಗಾವಿ ಜಿಲ್ಲೆಯಲ್ಲಿ ಕೈಗೊಳ್ಳಲಿದೆ. ಬೇಸಿಗೆಯಲ್ಲಿ ಈ ಭಾಗಕ್ಕೆ 4 ಟಿಎಮ್.ಸಿ ನೀರು ಮಹಾರಾಷ್ಟ್ರದಿಂದ ಸರಕಾರ ಕೊಡಿಸಬೇಕಿದೆ. ನೀರಾವರಿ ಸಚಿವರು ಗಮನ ಹರಿಸಿದರೆ ಅದು ಸಾಧ್ಯವಾಗುತ್ತದೆ ಎಂದರು. ಈ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಬದ್ದವಾಗಿದೆ. ಕಾಗೆ, ಸವದಿ ಅವರ ಆಸೆಗಳನ್ನು ಈಡೇರಿಸುವ ಕೆಲಸ ಸರಕಾರ ಮಾಡಲಿದೆ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಅಥಣಿ, ಸವದಿ ಅವರು ಕಾಂಗ್ರೆಸ್ ಸೇರುವಾಗ ಅಭಿವೃದ್ಧಿ ಒಂದೇ ಬೇಡಿಕೆ ಇಟ್ಟದ್ದರು. ಬೇರೆ ಯಾವ ಬೇಡಿ ಇಟ್ಟಿರಲಿಲ್ಲ. ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಲೋಕಸಭೆ, ಜಿಪಂ, ತಾಪಂ ಚುನಾವಣೆಯಲ್ಲಿ ಜಯ ಗಳಿಸುತ್ತೇವೆ ಎಂದು ನುಡಿದರು. ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆ ಇದೇ ತಿಂಗಲ್ಲಿ ಪ್ರಾರಂಭ ಮಾಡಲಿದ್ದೇವೆ ತಿಳಿಸಿದರು.
ಶಾಸಕ ಲಕ್ಷ್ಮಣ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಿರಾರು ಎಕರೆ ಜಮೀನು ಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಡುವಂತೆ, ಜನ ಗುಳೆ ಹೋಗುತ್ತಿರುವದನ್ನು ತಡೆಯುವಂತೆ ವಿನಂತಿಸಿಕೊಂಡರು. ಪಶುಕಾಲೇಜಿಗೆ ಅಂದಿನ ಸಿಎಂ ಬೊಮ್ಮಾಯಿ ಅವರು ಜಮೀನು ನೀಡಿದರು. ಆದರೆ ಹಣ ನೀಡಲಿಲ್ಲ ಪುಣ್ಯಾತ್ಮ. ಒಣ ದ್ರಾಕ್ಷಿ ಖರೀಸುವ ಬಗ್ಗೆ ಸರಕಾರ ಚಿಂತನೆ ಮಾಡಲಿ, ದ್ರಾಕ್ಷಿಗೆ ಬೆಂಬಲ ಬೆಲೆಗೆ ಕೇಂದ್ರಕ್ಕೆ ರಾಜ್ಯ ಸರಕಾರ ಮನವಿ ಮಾಡಲು ವಿನಂತಿಸಿದರು.

ಸಚಿವ ಕೆ. ವೆಂಕಟೇಶ ಮಾತನಾಡಿ, ಈ ಪಶು ವೈದ್ಯಕೀಯ ಕಾಲೇಜು ಎಲ್ಲ ರೈತರ ಮಕ್ಕಳಿಗೆ ಉಪಯೋಗವಾಗಲಿದೆ. ಇಲಾಖೆಯ ಅಧಿಕಾರಿಗಳು ರೈತರ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ಹೆಚ್ಚು ಹಾಲು ಉತ್ಪಾದನೆ ಬೆಳಗಾವಿ ಜಿಲ್ಲೆಯಲ್ಲಿ ಇದೆ. ರೈತರಿಗೆ ಇಲಾಖೆಯಿಂದ ಎನು ಸಹಕಾರ ಬೇಕು ತಾವು ನೀಡಲು ಬದ್ದ, ರೈತರ ಸಹಾಯಕ್ಕಾಗಿ ಸರಕಾರ ಸಿದ್ದ ಎಂದರು. ಭರಮಗೌಡಾ ಕಾಗೆ ಮಾತನಾಡಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ ಸ್ವಾಗತಿಸಿದರು.
ಸಚಿವರಾದ ರಾಮಲಿಂಗಾರೆಡ್ಡಿ, ಕೆ. ವೆಂಕಟೇಶ, ಎಮ್. ಎಸ್. ಭೋಸರಾಜು, ಶಾಸಕಾರದ ಲಕ್ಷ್ಮಣ ಸವದಿ, ರಾಜು ಕಾಗೆ, ಆಶೋಕ ಪಟ್ಟಣ, ಮಹೇಂದ್ರ ತಮ್ಮನ್ನವರ, ಬಾಬಾಸಾಹೇಬ ಪಾಟೀಲ, ಜೆ.ಟಿ.ಪಾಟೀಲ, ವಿಶ್ವಾಸ್ ವೈದ್ಯ, ವಿಪ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಪ್ರಕಾಶ ಹುಕ್ಕೇರಿ, ಗ್ರಾಪಂ ಅಧ್ಯಕ್ಷ ಶಾನಕ್ಕ ಪೂಜಾರಿ ಸೇರಿ ಅನೇಕ ಅಧಿಕಾರಿಗಳು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಕಟನೂರ ಗ್ರಾಪಂನಿಂದ ಸಿದ್ದರಾಮಯ್ಯ, ಡಿಕೆಶಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್, ಅವರಿಗೆ ಕಂಬಳಿ ಹೊದಿಸಿ, ಬೆಳ್ಳಿಯ ಗದೆ ನೀಡಿ ಸತ್ಕರಿಸಲಾಯಿತು.