ಮುದ್ದೆಬಿಹಾಲ್

ಎಸ್ಟಿ ಮೀಸಲಿಗೆ ನಮ್ಮ ಹೋರಾಟ ; ನಮ್ಮ ದಾರಿ ನಾವು ನೋಡಿಕೊಳ್ತೇವೆ: ನಂಜುಂಡಿ

ಎಸ್ಟಿ ಮೀಸಲಿಗೆ ನಮ್ಮ ಹೋರಾಟ ; ನಮ್ಮ ದಾರಿ ನಾವು ನೋಡಿಕೊಳ್ತೇವೆ: ನಂಜುಂಡಿ

ಮುದ್ದೇಬಿಹಾಳ : ಪ್ರಸ್ತುತ ರಾಜ್ಯ ಸರಕಾರದಲ್ಲಿ ವಿಶ್ವಕರ್ಮ ಸಮಾಜಕ್ಕೆ ದೊರೆಯಬೇಕಾದ ಹಕ್ಕುಗಳು ಸರಿಯಾಗಿ ಸಿಕ್ಕಿಲ್ಲ.40 ಲಕ್ಷದಷ್ಟು ರಾಜ್ಯದಲ್ಲಿ ನಮ್ಮ ಸಮಾಜ ಇದ್ದರೂ ವಿಶ್ವಕರ್ಮ ನಿಗಮಕ್ಕೆ ಕಳೆದ ಆರು ತಿಂಗಳಿನಿಂದ ಒಬ್ಬ ಅಧ್ಯಕ್ಷನನ್ನು ನೇಮಿಸಲು ಆಗುತ್ತಿಲ್ಲ.ಆದರೆ ನಮ್ಮ ಸಮಾಜದ ವಿಷಯ ಬಂದಾಗ ನಾನು ಸಮಾಜದ ಪರ ನಿಲ್ಲುತ್ತೇನೆ ಎಂದು ವಿಧಾನಪರಿಷತ್ ಸದಸ್ಯ,ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಪಂಚಕಸುಬಗಳ ಮೂಲಕ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವಿಶ್ವಕರ್ಮ ಸಮಾಜಕ್ಕೆ ಎಸ್‌.ಟಿ ಪಂಗಡದ ಮೀಸಲಾತಿ ದೊರೆಯಬೇಕಿತ್ತು.ಸೂಕ್ತ ದಾಖಲೆಗಳ ಕೊರತೆಯಿಂದ ಅದು ವಿಳಂಬವಾಗಿದೆ.ಅದಕ್ಕಾಗಿ ಸರಕಾರಕ್ಕೆ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮನವಿ ಮಾಡಿದ್ದಾಗ ಸರಕಾರ ತಕ್ಷಣ ವಿಶ್ವವಿದ್ಯಾಲಯವೊಂದರಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಲು ಮುಂದಾಗಿದೆ.ಕೇವಲ ವಿಶ್ವಕರ್ಮ ಸಮಾಜವಷ್ಟೇ ಅಲ್ಲ ಇನ್ನುಳಿದ ಹಿಂದುಳಿದ ಸಮುದಾಯಗಳು ಇನ್ನೂ ಸಂಕಷ್ಟದಲ್ಲಿಯೇ ಕಾಲ ಕಳೆಯುತ್ತಿವೆ.ಅದಕ್ಕಾಗಿ ಹಳ್ಳಿ,ಪಟ್ಟಣಗಳನ್ನು ಸುತ್ತುತ್ತಾ ಹೋರಾಟ ಮಾಡುತ್ತಿದ್ದೇನೆ.ಎಲ್ಲ ಕುಲಕಸುಬು ಮಾಡುವ ಜನಾಂಗದವರದ್ದು ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕು ಎಂದು ಹೇಳಿದರು. 

ಹಿಂದುಳಿದ ವರ್ಗದವರಿಗೆ ರಾಜಕೀಯ ಶಕ್ತಿ ಇಲ್ಲವಾಗಿದೆ.ಇವತ್ತು ಕೂಡ ಸಮಾಜದಲ್ಲಿ ವಿದ್ಯೆಯ ಕೊರತೆ ಇದೆ.ನಮ್ಮ ಮಕ್ಕಳು ಜಾಣರಾಗಿದ್ದರೂ ಕಷ್ಟಪಟ್ಟು ಓದಿದರೂ,ತಂದೆ ತಾಯಿ ಮನೆ ಮಠ ಮಾರಿ ಓದಿಸಿದರೂ ಕೂಡಾ ಯಾವ ಕಾರಣಕ್ಕೂ ಸರಕಾರಗಳು ನೌಕರಿ ಕೊಡುವುದಿಲ್ಲ.ಕೆಪಿಎಸ್ಸಿಗೆ ಹೋದರೆ ಬಲಿಷ್ಠವಾದ ಸಮಾಜಗಳು ಅವರವರ ಸಮಾಝದವರನ್ನು ಗುರುತಿಸುತ್ತಾರೆ.ಆದರೆ ನಮ್ಮಂಥಹ ಹಿಂದುಳಿದ ಸಮಾಜದ ಮಕ್ಕಳು ಹೊಟೇಲ್‌ನಲ್ಲಿ ಸಪ್ಲೈಯರ್‌ಗಳಾಗಿ,ಡ್ರೈವರ್‌ಗಳಾಗಿ ದುಡಿಯುತ್ತಾರೆ.ಹೆಣ್ಣು ಮಕ್ಕಳು ಗಾರ್ಮೆಂಟ್‌ನಲ್ಲಿ ದುಡಿಯುತ್ತಾರೆ.ದೇಶಕ್ಕೆ ಸಂಸ್ಕೃತಿ ಕಲಿಸಿಕೊಟ್ಟ ವಿಶ್ವಕರ್ಮ ಸಮಾಜ ನಮ್ಮನ್ನು ಬದುಕಿಸಿ ಎಂದು ಕೇಳುತ್ತಿದೆ ಎಂದು ಹೇಳಿದರು. 

ಜಾತಿ ಬಲ ಇಲ್ಲ.ನಾವು ಲಾಬಿ ಮಾಡುವ ಸ್ಥಿತಿಯಲ್ಲಿ ಇಲ್ಲ.ಸಾಮಾಜಿಕ ನ್ಯಾಯ ಸಿಗಬೇಕು.ಕರೋನಾ ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಪರಿಹಾರವನ್ನೂ ಕೊಟ್ಟಿಲ್ಲ,ಎರಡು ಹೊತ್ತು  ಊಟವನ್ನು ಕೊಟ್ಟಿಲ್ಲ .ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ,ಸಮಾಜದ ವಿಷಯ ನೋವು ಬಂದಾಗ ಹೇಳಿಕೊಳ್ಳಲು ಅವಕಾಶವಿದೆ.ಅದಕ್ಕಾಗಿ ಬಹಿರಂಗವಾಗಿ ಹೇಳುತ್ತಿದ್ದೇನೆ.ಇದು ಪಕ್ಷದ ವಿರೋಧಿ ಚಟುವಟಿಕೆ ಅಲ್ಲ ಎಂದು ಹೇಳಿದರು. 

ಪುರಸಭೆ ಸದಸ್ಯೆ ಸಹನಾ ಬಡಿಗೇರ,ತಾಲೂಕಾಧ್ಯಕ್ಷ ಮಲ್ಲಣ್ಣ ಪತ್ತಾರ,ಬಾಳು ಗಿರ್‌ಗಾಂವಕರ,ವಿಜಯಕುಮಾರ ಬಡಿಗೇರ,ಲೋಹಿತ ಕಲ್ಲೂರ,ಪ್ರಮೋದ ಬಡಿಗೇರ,ನಾರಾಯಣ ಮಾಯಾಚಾರಿ,ರಮೇಶ ಪತ್ತಾರ,ಮೌನೇಶ ಬಡಿಗೇರ,ಕಾಶೀಪತಿ ಬಡಿಗೇರ,ಅಶೋಕ  ಬಡಿಗೇರ,ಬಾಲಚಂದ್ರ ಬಡಿಗೇರ,ಕಾಶೀನಾಥ ಬಡಿಗೇರ(ಹೊಕ್ರಾಣಿ),ಸುರೇಶ ಪತ್ತಾರ,ಚಂದ್ರಶೇಖರ ಪತ್ತಾರ,ಮುತ್ತು ಬಡಿಗೇರ,ಜ್ಯೋತಿ ಮಾಯಾಚಾರಿ,ವಿದ್ಯಾ ಬಡಿಗೇರ,ಭಾಗ್ಯಶ್ರೀ ಬಡಿಗೇರ,ಸುವರ್ಣ ಬಡಿಗೇರ ಮೊದಲಾದವರು ಇದ್ದರು. 

---- 

ಸಮಾಜದವರಿಂದಲೇ ನನ್ನ ರಾಜಕೀಯ ನಿರ್ಧಾರ-ನಂಜುಂಡಿ  

ಇಂದು ರಾಜಕೀಯ ಜಾತಿ ಆಧಾರಿತವಾಗಿಯೇ ಇದೆ.ಯಾರು ಏನೇ ಹೇಳಿದರೂ ನಾನು ಹೇಳುತ್ತೇನೆ ಜಾತಿಗಳನ್ನೇ ಇಟ್ಟುಕೊಂಡು ಇಂದು ರಾಜಕೀಯವಾಗಿ ಬೆಳೆಯುತ್ತಿದ್ದಾರೆ.ವಿಧಾನಪರಿಷತ್ ಸದಸ್ಯ ಆದ್ರೂ ಆಗದಿದ್ದರೂ ನನಗೆ ಏನೂ ವ್ಯತ್ಯಾಸವಾಗಿಲ್ಲ.ಎಲ್ಲಿಯವರೆಗೂ ಶಾಖ ತಾಳೋಕೆ ಆಗುತ್ತದೆಯೋ ಅಲ್ಲಿಯವರೆಗೂ ಬೆಂಕಿ ಮುಂದೆ ನಾವು ಕುಳಿತುಕೊಳ್ಳುತ್ತೇವೆ.ಒಂದು ವೇಳೆ ಶಾಖ ತಡೆದುಕೊಳ್ಳಲಾಗದಿದ್ದಾಗ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ.ನನಗೆ ಪಕ್ಷ,ಅಧಿಕಾರಕ್ಕಿಂತ ನಾನು ಸಾಯೋವರೆಗೂ ಸಮಾಜ ಬಿಟ್ಟು ಕದಲುವುದಿಲ್ಲ.ನಮ್ಮ ಮಕ್ಕಳಿಗೆ ವಿದ್ಯೆ ಕೊಟ್ಟರೆ ಸಾಕು ಅದನ್ನು ಕೊಡುವ ಯೋಜನೆ ಸರಕಾರ ಮಾಡಬೇಕು.ಭವಿಷ್ಯದ ರಾಜಕೀಯ ನಿರ್ಧಾರವನ್ನು ನಮ್ಮ ಸಮಾಜ ತೆಗೆದುಕೊಳ್ಳುತ್ತದೆ ಎಂದು ನಂಜುಂಡಿ ಮಾಮಿರ್ಕವಾಗಿ ಹೇಳಿದರು. 


ಸುದ್ದಿ ಓದಿ