ಮಹಿಳಾ ಸಬಲೀಕರಣಕ್ಕೆ ಸಂಘಟನೆ ಅತ್ಯಗತ್ಯ: ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ
ರಾಣೆಬೆನ್ನೂರು 7: ಕಲಿಯುಗದಲ್ಲಿ ಸಂಘಟನೆಯ ಶಕ್ತಿಗಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ. ವ್ಯಕ್ತಿಗಿಂತ ಸಂಘಟನೆಯ ಶಕ್ತಿ ಶ್ರೇಷ್ಠವಾಗಿದ್ದು, ಸಮಾಜದ ಅಭಿವೃದ್ಧಿಗೆ ಸಂಘಟಿತ ಪ್ರಯತ್ನಗಳು ಅಗತ್ಯವೆಂದು ಚಿತ್ರದುರ್ಗದ ಶ್ರೀ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು. ನಗರದ ಶ್ರೀ ಆದಿಶಕ್ತಿ ದೇವಸ್ಥಾನದ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘಟನೆ ಸಮಿತಿ (ಅಂಬೇಡ್ಕರ್ ಧ್ವನಿ) ಆಯೋಜಿಸಿದ್ದ ಮಹಿಳಾ ಸಂಘಟನೆ ಜಾಗೃತಿ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದೇ ನಿಜವಾದ ಧರ್ಮ ಎಂದು ಹೇಳಿದರು.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿದ್ದು, ಸ್ತ್ರೀ-ಪುರುಷ ಎಂಬ ಭೇದಭಾವಕ್ಕೆ ಅವಕಾಶ ಇರಬಾರದು. ಮಹಿಳೆಯರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು. ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ಸಿ.ಜಿ. ಮಾತನಾಡಿ, ಮಹಿಳೆಯರ ಜಾಗೃತಿ ಹಾಗೂ ಸಂಘಟನೆಯ ಬಲವರ್ಧನೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಮಹಿಳೆಯರು ಯಾವುದೇ ತಾರತಮ್ಯವಿಲ್ಲದೆ ಒಂದಾಗಿ ಸಂಘಟನೆಯ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಸಮಾವೇಶವನ್ನು ಉದ್ಘಾಟಿಸಿದ ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ಮಹಿಳಾ ಶಕ್ತಿ ವಿಶ್ವಶಕ್ತಿಯಾಗಿದೆ. ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಸಂಘಟನೆಯ ಮೂಲಕ ಮಹಿಳೆಯರು ಇನ್ನಷ್ಟು ಸಬಲರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಾಕಿ ಸೌಹಾರ್ದ ಸಂಘದ ಅಧ್ಯಕ್ಷೆ ಶ್ರೀಮತಿ ರೂಪಾ ಶ್ರೀನಿವಾಸ್ ಕಾಕಿ, ಬಿಜೆಪಿ ಮಹಿಳಾ ಮುಖಂಡೆ ಶ್ರೀಮತಿ ಭಾರತಿ ಜಂಬಿಗಿ, ನೀಲಕಂಠಪ್ಪ ಕುಸುಗೂರು, ಕಿರಣಕುಮಾರ ಅಂಗಡಿ, ಹನುಮಂತಪ್ಪ ಕಬ್ಬಾರ, ಜಯಪ್ಪ ಕೆಂಪಳ್ಳೇರ, ಎಂ.ಡಿ. ರವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೀರ್ತನಾ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಮೋಹನ್ ಬೆಣಗೇರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.