ಮಾಹಿತಿ ಆಯೋಗ ಬೆಳಗಾವಿ ಪೀಠದಿಂದ ದಂಡ ಮತ್ತು ಶಿಸ್ತು ಕ್ರಮಕ್ಕೆ ಆದೇಶ
ಲೋಕದರ್ಶನ ವರದಿ
ಕಾರವಾರ 15 :- ಮಾಹಿತಿ ಹಕ್ಕು, ಕಾಯ್ದೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತದ ಪಾರದರ್ಶಕತೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದುಕೊಳ್ಳುವುದರ ಮೇಲೆ ನಾಗರಿಕ ನಿಗಾ ಇಡಲು ಮತ್ತು ಉತ್ತರದಾಯಿತ್ತ ಕಾಯ್ದುಕೊಳ್ಳಲು ಅತ್ಯಂತ ಪ್ರಮುಖವಾದ ಕಾಯ್ಕೆಯಾಗಿದೆ ಎಂದು ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ಹೇಳಿದರು.
ಅವರು ಸೋಮವಾರ ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದಲ್ಲಿ ಆಯೋಜಿಸಿದ್ದ ಮಾಹಿತಿ ಹಕ್ಕು ಕಾಯ್ದೆ ದಿನಾಚರಣೆಯಲ್ಲಿ ಮಾತನಾಡಿದರು. ಅಕ್ಟೋಬರ್ 12, 2005 ರಲ್ಲಿ ಈ ಕಾಯ್ದೆ ದೇಶದಲ್ಲಿ ಜಾರಿಗೆ ಬಂದ ಬಳಿಕ ಆಡಳಿತದಲ್ಲಿ ಸುಧಾರಣೆ ತಂದು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡುವಲ್ಲಿ ಕೆಲಸ ಮಾಡಿದೆ. ಆದರೂ ಸರ್ಕಾರಿ ಅಧಿಕಾರಿಗಳು ಇನ್ನೂ ಪರಿಣಾಮಾಕಾರಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಆಶಯದಂತೆ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಆಯೋಗ ತಂಡವಾಗಿ ಕೆಲಸ ಮಾಡುತ್ತಿದೆ ಬೆಳಗಾವಿ ಪೀಠದಲ್ಲಿ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಮಾಹಿತಿ ಹಕ್ಕು ಕಾಯ್ದೆಯ ಆಶಯದ ಪೂರಕವಾಗಿ ಆಯೋಗದ ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಜನರಿಗೆ ಕಾಯ್ದೆ ಲಾಭಪಡೆಯಲು ಅನುಕೂಲವಾಗುವಂತೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಮಾಹಿತಿ ಆಯೋಗದಿಂದ ಹಲವಾರು ಇಲಾಖೆ ಅಧಿಕಾರಿಗಳಿಗೆ ದಂಡ ಮತ್ತು ಶಿಸ್ತು ಕ್ರಮ ಜರುಗಿಸಿ, ಮಾಹಿತಿ ಅಧಿಕಾರಿಗಳಿಗೆ ಮೇಲ್ಮನವಿದಾರರ ಅರ್ಜಿಗಳಿಗೆ ಸ್ಪಂದಿಸಿ ಕಾಲಮಿತಿಯೊಳಗೆ ಸರಿಯಾದ ಮಾಹಿತಿ ನೀಡಲು ತಿಳಿಸಲಾಗಿದೆ. ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಲ್ಲಿ ಶಿಸ್ತು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನು ಸಹ ನೀಡಲಾಗಿದೆ ಎಂದು ತಿಳಿಸಿದ್ದಾರೆ.