ಗುಣಮಟ್ಟದ ಕಟ್ಟಡಗಳನ್ನು ಕಟ್ಟಿ ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಿ ಗೋವಿಂದ ಕಾರಜೋಳ
ಮಹಾಲಿಂಗಪುರ 01 : ಪ್ರಮುಖ ಸ್ಥಳಗಳಲ್ಲಿಯ ಸಂಸ್ಥೆ ಜಾಗೆಗಳಲ್ಲಿ ಊರಿನ ಅಂದ ಹೆಚ್ಚುವ ನೀಲನಕ್ಷೆ ತಯಾರಿಸಿ, ನೂರು ವರ್ಷ ಬಾಳಿಕೆ ಬರುವ ಉತ್ತಮ ಗುಣಮಟ್ಟದ ಕಟ್ಟಡಗಳನ್ನು ಕಟ್ಟಿ ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
1ಕೋಟಿ ರೂ. ವೆಚ್ಚದ 30 ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 1958ರಲ್ಲಿ ಶಿವಪ್ಪ ಘಟ್ನಟ್ಟಿಯವರ ನೇತೃತ್ವದಲ್ಲಿ ಕೇವಲ 300ರೂ.ಗಳ ಬಂಡವಾಳದಲ್ಲಿ ಪ್ರಾರಂಭವಾದ ಮಹಾಲಿಂಗಪುರ ಗ್ರಾಮ ಸೇವಾ ಸಹಕಾರಿ ಸಂಘ ಇಂದು ಅಧ್ಯಕ್ಷ ಬಸನಗೌಡ ಪಾಟೀಲ ಮತ್ತು ನಿರ್ದೇಶಕರ ಶ್ರಮದಿಂದ ಸದೃಢ ಪಿಕೆಪಿಎಸ್ ಆಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿ, ಭವಿಷ್ಯದಲ್ಲಿ ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿ ಬೆಳೆದು ನಂಬರ್ ಒನ್ ಸ್ಥಾನಕ್ಕೇರಲಿ ಎಂದು ಹಾರೈಸಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಸದಾ ರೈತರು ಮತ್ತು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಏಳ್ಗೆಯ ಜೊತೆ ಜೊತೆಗೆ ಸಂಘ ಅಭಿವೃದ್ಧಿ ಹೊಂದಲಿ ಎಂದರು.
ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ರೈತರಿಗೆ ಬೆಳೆ ಸಾಲ, ಬೀಜ, ರಸಗೊಬ್ಬರ, ಟ್ಯಾಕ್ಟರ್ ಸಾಲ ಮತ್ತು ವ್ಯಾಪಾರಿಗಳಿಗೆ ವಾಣಿಜ್ಯ ಸಾಲ, ನೇಕಾರ ಸಾಲ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ , ಹಾಲು ಸಂಗ್ರಹಣಾ ಘಟಕ, ಶುದ್ಧ ಕುಡಿಯುವ ನೀರಿನ ಘಟಕ, ಬೆಂಬಲ ಬೆಲೆ ಮುಂತಾದ ಸಮಾಜ ಮುಖಿ ಕಾರ್ಯಗಳಿಂದ ಸಂಘ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಶಾಸಕ ಸಿದ್ದು ಸವದಿಯವರ ಸಹಕಾರವೇ ಕಾರಣ ಎಂದರು. ಶೇ.3 ರ ಕಡಿಮೆ ಬಡ್ಡಿ ದರದಲ್ಲಿ ಟ್ಯಾಕ್ಟರ್ ಗಳನ್ನು ವಿತರಿಸಲಾಯಿತು. ಪಿಕೆಪಿಎಸ್ ಮುಖ್ಯಕಾರ್ಯನಿರ್ವಾಹಕ ಈರಣ್ಣ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಥಳೀಯ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಸ್.ತಳೇವಾಡ, ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಜಿ.ಪಂ. ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಅ.ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಸ.ಅಭಿವೃದ್ಧಿ ಅಧಿಕಾರಿ ಎಸ್.ಆರ್.ಬಾಡಗಿ, ಬಿಡಿಸಿಸಿ ಬ್ಯಾಂಕಿನ ನಿರೀಕ್ಷಕ ಎಸ್.ಆರ್.ಗಡೆಪ್ಪನವರ, ಪಿಕೆಪಿಎಸ್ ಉಪಾಧ್ಯಕ್ಷೆ ಸಾಂಯವ್ವ ಸಂಶಿ, ನಿರ್ದೇಶಕ ಈರಪ್ಪ ದಿನ್ನಿಮನಿ, ಚನ್ನಪ್ಪ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಕುಳ್ಳೊಳ್ಳಿ, ವಿಷ್ಣುಗೌಡ ಪಾಟೀಲ, ಬಸವರಾಜ ಅರಳಿಕಟ್ಟಿ, ಅಲ್ಲಪ್ಪ ಪೂಜಾರಿ, ಶಿವಲಿಂಗ ಘಂಟಿ, ಹಣಮಂತ ಬುರುಡ, ಸಂಗಪ್ಪ ಡೋಣಿ, ಅಶೋಕಗೌಡ ಪಾಟೀಲ ಶೈಲಾ ಪವಾರ, ಜಯಶ್ರೀ ಮೇದಾರ ಮತ್ತು ಹಿರಿಯರು, ಶೇರುದಾರರು ಇತರರು ಇದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿ, ಕುಳಲಿ ಪಿಕೆಪಿಎಸ್ ನಿರ್ವಾಹಕ ನಿಂಗರಾಜ ಗುಡಿ ಸ್ವಾಗತಿಸಿ, ಕಾನಿಪ ಕಾರ್ಯದರ್ಶಿ ನಾರನಗೌಡ ಉತ್ತಂಗಿ ನಿರೂಪಿಸಿದರು.