ಒಂದು ಸ್ಮಾಟ್ಫೋರ್ನ್ಗೆ ಒಂದು ಸಸಿ : ಇದು ಆಫರ್ ಅಲ್ಲ, ಅರಿವಿನ ಅಭಿಯಾನ ಜೊತೆ ಪರಿಸರ ಪ್ರೇಮ
ಮಹಾಲಿಂಗಪುರ 27: ಲಾಕ್ಡೌನನಲ್ಲಿ ಮುಗ್ಗರಿದ ವ್ಯವಹಾರವನ್ನು ಉತ್ತೇಜಿಸಿಕೊಳ್ಳಲು ಅಂಗಡಿಯವರು ಏನೇನೋ ಆಫರ್ ಘೋಷಣೆ ಮಾಡುತ್ತಾರೆ. ಮೋಬೈಲ್ ಅಂಗಡಿಯವರಂತೂ ಒಂದು ಮೋಬೈಲ್ ಕೊಂಡರೆ ಹೆಡ್ಫೋನ್, ಬ್ಲೂಟೂತ್ ಕವರ್, ಬ್ಯಾಗ್, ನೀಡುವುದು ವಾಡಿಕೆ. ಆದರೆ ಮಹಾಲಿಂಗಪುರದ ಬಾಲಾಜಿ ಮೋಬೈಲ್ ಸ್ಟೋರ್ ಮಾಲೀಕ ಗೋವಿಂದಗೌಡ ಪಾಟೀಲ ಎಂಬುವವರು ಒಂದು ಸ್ಮಾಟ್ಫೋರ್ನ್ಗೆ ಒಂದು ಸಸಿ ಫ್ರೀ ಎಂದು ಘೋಷಣೆ ಮಾಡಿ ಗ್ರಾಹಕರನ್ನು ಸೆಳೆಯುವುದರೊಂದಿಗೆ ಅವರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
ಮೂಲತಃ ರನ್ನಬೆಳಗಲಿ ಪಟ್ಟಣದ ರೈತ ಪರಿವಾರದ ಗೋವಿಂದಗೌಡ ಪಾಟೀಲ ಅವರು ತಮ್ಮ ಮಹಾಲಿಂಗಪುರ ಮತ್ತು ಬನಹಟ್ಟಿಯ ತಮ್ಮ ಮೋಬೈಲ್ ಸ್ಟೋರ್ಗಳಲ್ಲಿ ಒಂದು ಸ್ಮಾಟ್ಫೋರ್ನ್ ಕೊಂಡರೆ ಒಂದು ಸಸಿ ಫ್ರೀ ಎಂಬ ಅಭಿಯಾನ ಆರಂಭಿಸಿ ತಮ್ಮ ಗ್ರಾಹಕರಲ್ಲೂ ಪರಿಸರ ಜಾಗೃತಿ ಮೂಡಿಸುವ ವಿಭಿನ್ನ ಪ್ರಯತ್ನ ನಡೆಸಿದ್ದಾರೆ. ಕಳೆದ ವಾರ ಆರಂಭಿಸಿದ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ನಿತ್ಯ ಸರಾಸರಿ 8-10 ಸಸಿ ವಿತರಿಸಿ ಒಂದೇ ವಾರದಲ್ಲಿ ನೂರರ ಗಡಿ ತಲುಪಿದ್ದಾರೆ.
ಒಂದು ಸ್ಮಾರ್ಟ್ಫೊನ್ ಖರೀದಿಸಿದವರಿಗೆ ಉತ್ತಮ ಗುಣಮಟ್ಟದ ಲಕ್ನೋ-49 ಎಂಬ ಪೇರಲ ಹಣ್ಣಿನ ಸಸಿ ನೀಡಿ ಫೊಟೋ ತೆಗೆಸಿಕೊಂಡು, ಸಸಿ ಪಡೆದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆ ಸಸಿ ನೆಟ್ಟು ಫೋಟೋ ಕಳಿಸಬೇಕು. ನಿರಂತರ ಆರೈಕೆ ಮಾಡಬೇಕು ಎಂದು ಜವಾಬ್ದಾರಿ ತುಂಬುವ ಮೂಲಕ ಫಲೋಅಪ್ ಮಾಡುತ್ತಿದ್ದೇನೆ. ಗ್ರಾಹಕರಿಂದ ಕೂಡ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲರೂ ಸಸಿ ನೆಟ್ಟು ಫೋಟೋ ಕಳಿಸಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಈ ಅಭಿಯಾನ ನಿರಂತರ ಸಾಗಲಿದೆ.
-ಗೋವಿಂದಗೌಡ ಪಾಟೀಲ,
ಬಾಲಾಜಿ ಮೊಬೈಲ್ ಸ್ಟೋರ್ ಮಹಾಲಿಂಗಪುರ
ಇದು ಆಫ್ ಅಲ್ಲ, ಅಭಿಯಾನ
ಗೋವಿಂದಗೌಡ ಪಾಟೀಲ ಅವರು ನೆಲ, ಜಲ, ಪರಿಸರ ಕಾವಲು ಬಗ್ಗೆ ಅತೀವ ಆಸಕ್ತಿ ಉಳ್ಳವರಾಗಿದ್ದು, ಮಳೆ ನೀರಿನ ಕೋಯ್ಲು ಬಗ್ಗೆ ತಮ್ಮ ಗದ್ದೆಯಲ್ಲದೇ ಇತರ ರೈತರಲ್ಲೂ ಅರಿವು ಮೂಡಿಸಿ ಜಲ ಮರುಪೂರ್ಣ ಬಗ್ಗೆ ಅಭಿಯಾನ ಮಾಡುತ್ತಿದ್ದರು. ಈಗ ಗ್ರಾಹಕರಿಗೆ ಉಚಿತ ಸಸಿ ನೀಡುತ್ತಿರುವುದು ಸೂಕ್ತವಾಗಿದೆ. ಅಂಗಡಿ ಮಾಲೀಕರು ವ್ಯಾಪಾರ ಹೆಚ್ಚಿಸಿಕೊಳ್ಳಲು ಸ್ಮಾರ್ಟ್ಫೊನ್ ಜೊತೆ ಇನ್ನೇನೋ ಇಲೆಕ್ಟ್ರಾನಿಕ್ ಐಟಂ ಫ್ರೀ ಕೊಟ್ಟು ಗ್ರಾಹಕರನ್ನು ಸೆಳೆಯಬಹುದಿತ್ತು. ಆದರೆ ಗ್ರಾಹಕರು ಕೇಳಿದ್ದನ್ನು ಕೊಡುವ ಬದಲು ಅವರಿಗೆ ಏನು ಕೊಡಬೇಕು ಎಂಬುದರ ಓಚಿತ್ಯತೆ ಅರಿತು ಸಸಿ ನೀಡುತ್ತಿರುವುದು ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ. ಇದು ವ್ಯಾಪಾರದ ಆಫರ್ ಅಲ್ಲ, ಅರಿವಿನ ಅಭಿಯಾನ ಎನ್ನಬಹುದು.