ಅಧಿಕಾರಿಗಳು, ಸಿಬ್ಬಂದಿ ಪಕ್ಷಾತೀತವಾಗಿ ಜನರ ಸೇವೆ ಮಾಡಬೇಕು: ಉಮಾಶ್ರೀ
ಮಹಾಲಿಂಗಪುರ,02 : ಅಧಿಕಾರಿಗಳು ಮತ್ತು ಸಿಬ್ಬಂದಿ ಪಕ್ಷಾತೀತವಾಗಿ ಜನರ ಸೇವೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.
ಬುಧವಾರ ಸಂಜೆ ಸ್ಥಳೀಯ ಪುರಸಭೆಗೆ ಆಗಮಿಸಿದ ಅವರು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ, ಕುಡಿಯುವ ನೀರು, ಚರಂಡಿ,ರಸ್ತೆ ಮುಂತಾದ ಮೂಲ ಸೌಲಭ್ಯಗಳ ಕೊರತೆಯಾಗದಂತೆ ನಿಗಾ ವಹಿಸಿ ಸ್ವತಃ ವಾರ್ಡುಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಬೇಕೆಂದರು.
1 ನೇ ವಾರ್ಡಿನ ನಿವಾಸಿ ರಾಜೇಶ ಬಾವಿಕಟ್ಟಿ, ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರ ಸ್ಥಾಪನೆ ಹಾಗೂ ಚರಂಡಿ ದುರಸ್ತಿ ಆಗ್ರಹಿಸಿ ಅಹವಾಲು ಸಲ್ಲಿಸಿದರು.
7ನೇ ವಾರ್ಡಿನ ಮಹಾಲಿಂಗ ಭಜಂತ್ರಿ, ವಾರ್ಡಿನ ಸಾರ್ವಜನಿಕ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಲು ಕೋರಿ ಮನವಿ ನೀಡಿದರು.
14ನೇ ವಾರ್ಡಿನ ಸಿರಾಜ್ ಪಾಂಡು, ವಾರ್ಡು ಕೊಳಚೆ ಪ್ರದೇಶವಾಗಿದ್ದು, ಕೊಳಚೆ ನಿರ್ಮುಲನಾ ಮಂಡಳಿಯಿಂದ ಅನುದಾನ ತಂದು ಅಭಿವೃದ್ಧಿಪಡಿಸಲು ಕೋರಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ, ಪುರಸಭೆ ಬಳಿಯ ಹಳೆಯ ಆಸ್ಪತ್ರೆ ಕಟ್ಟಡ ಮತ್ತು ಜಾಗವನ್ನು ಪುರಸಭೆಗೆ ಹಸ್ತಾಂತರಿಸಿ ವ್ಯಾಪಾರ ಮಳಿಗೆ, ಸಾರ್ವಜನಿಕ ಗ್ರಂಥಾಲಯ ಮುಂತಾದವುಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲು ಕೋರಿ ಮನವಿ ನೀಡಿದರು.
12ನೇ ವಾರ್ಡಿನ ಆನಂದ ಬಂಡಿ, ವಾರ್ಡಿನ ಅಂಗನವಾಡಿ ದುರಸ್ತಿ ಹಾಗೂ ಮಕ್ಕಳ ಓಡಾಟಕ್ಕೆ ಅನುಕೂಲಕರ ಸಿಡಿ ಮಾಡಲು ಕೋರಿ ಮನವಿ ನೀಡಿದರು.
ಅರ್ಜುನ ದೊಡ್ಡಮನಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮತ್ತು ಪೌರ ಕಾರ್ಮಿಕರ ವೇತನದ ಬಗ್ಗೆ ಗಮನ ಸೆಳೆದರು.
ಮುಖಂಡ ವಿಠ್ಠಲ ಸಂಶಿ, ಪಟ್ಟಣದ ವಲ್ಲಾ ವಾರ್ಡುಗಳಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯಲು ಕೋರಿ ಮನವಿ ನೀಡಿದರು.
ಸ್ಥಾಯಿ ಸಮಿತಿ ಛೇರ್ಮನ್ ಬಲವಂತಗೌಡ ಪಾಟೀಲ, ಶೇಖರ ಅಂಗಡಿ, ವಿನೋದ ಸಿಂಪಿ, ಸಿದ್ದು ಬೆನ್ನೂರ, ಲಕ್ಷ್ಮಣ ಮಾಂಗ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ವ್ಯವಸ್ಥಾಪಕ ಎಸ್.ಎಂ.ಪಾಟೀಲ, ಅಭಿಯಂತರ ಎಸ್.ಎಂ.ಕಲ್ಬುರ್ಗಿ, ಸಿ.ಎಸ್.ಮಠಪತಿ, ಪುರಸಾಭಾ ಸದಸ್ಯರು, ಸಾರ್ವಜನಿಕರು ಇದ್ದರು.