ಅಕ್ಟೋಬರ್ 26, 27 ಮೈಸೂರಿನಲ್ಲಿ ಎಐಯುಟಿಯುಸಿ ಸಂಘಟಿತ ಕಾರ್ಮಿಕ ಸಮ್ಮೇಳನ
- ಯಶಸ್ವಿಗೊಳಿಸಲು ಕರೆ
ಬಳ್ಳಾರಿ 16: ಕೇಂದ್ರೀಯ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಸಂಘಟಿತ 4ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನವು ಅಕ್ಟೋಬರ್ 26, 27ರಂದು ಮೈಸೂರಿನಲ್ಲಿ ನಡೆಯಲಿದೆ. ಕೇಂದ್ರದಲ್ಲಿ ದೀರ್ಘ ಕಾಲ ಆಳಿದ ಕಾಂಗ್ರೆಸ್ ಹಾಗೂ ಪ್ರಸಕ್ತ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳು ದೇಶದ ಸಂಪತ್ತು ಹಾಗೂ ಕಾರ್ಮಿಕರ ಶ್ರಮಶಕ್ತಿಯನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿವೆ. ಜನರ ತೆರಿಗೆ ಹಣ ಹಾಗೂ ಕಾರ್ಮಿಕರ ಶ್ರಮದಿಂದ ಕಟ್ಟಿದ ರೈಲ್ವೇ, ಬ್ಯಾಂಕು-ವಿಮೆ, ಉಕ್ಕು, ಕಲ್ಲಿದ್ದಲು, ವಿದ್ಯುತ್ ಉತ್ಪಾದನೆ ಇತ್ಯಾದಿ ಸಾರ್ವಜನಿಕ ಉದ್ಧಿಮೆಗಳನ್ನು ಟಾಟಾ, ಅಂಬಾನಿ ಮತ್ತು ಅದಾನಿಯಂತಹ ಕಾರ್ೋರೇಟ್ ಮನೆತನಗಳಿಗೆ ಧಾರೆಯೆರೆಯಲಾಗುತ್ತಿದೆ. ಕಾರ್ಮಿಕರು ಅಪಾರ ತ್ಯಾಗ ಬಲಿದಾನಗಳಿಂದ ಗಳಿಸಿದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವು ಕಾರ್ಮಿಕ ಕಾಯ್ದೆಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಿ 4 ಲೇಬರ್ ಕೋಡ್ (ಕಾರ್ಮಿಕ ಸಂಹಿತೆ)ಗಳನ್ನು ರೂಪಿಸಿದೆ. ಕರ್ನಾಟಕದಲ್ಲೂ ಹಿಂದಿನ ಬಿಜೆಪಿ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದು ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಸಿತು ಹಾಗೂ ಮಹಿಳೆಯರಿಗೆ ರಾತ್ರಿ ಪಾಳಿ ಜಾರಿಗೆ ತಂದಿತು. ಕಾರ್ಮಿಕರಿಂದ ಸಾಕಷ್ಟು ವಿರೋಧವಿದ್ದರೂ, ಈಗಿನ ಕಾಂಗ್ರೆಸ್ ಸರ್ಕಾರ ಈ ನೀತಿಯನ್ನು ಹಿಂಪಡೆಯದೆ, ಹಾಗೆಯೇ ಮುಂದುವರೆಸಿದೆ. ಅಷ್ಟೇ ಅಲ್ಲದೆ ಐಟಿ/ಬಿಟಿ ಕ್ಷೇತ್ರದ ಉದ್ಯೋಗಿಗಳಿಗೆ 14 ಗಂಟೆ ದುಡಿಮೆ ಅವಧಿ ಜಾರಿಗೆ ತರುವ ನಿಟ್ಟಿನಲ್ಲಿ, ಕಾರ್ಮಿಕ ಇಲಾಖೆಯ ಮೂಲಕ ಅಭಿಪ್ರಾಯ ಸಂಗ್ರಹಿಸಲು ಹೊರಟಿದೆ!! ಇದು ನಿಜಕ್ಕೂ ಖಂಡನೀಯ ನಡೆ. ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಭರವಸೆ ನೀಡಿಯೂ, ಇದುವರೆಗೂ ಜಾರಿ ಮಾಡದೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಖಂಡನೀಯ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಖಾಸಗೀ ವಲಯದಲ್ಲಿ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಂಡಿರುವ ಕಾರ್ಮಿಕರು ಕ್ರೂರ ಶೋಷಣೆಗೆ ಒಳಗಾಗುತ್ತಿದ್ದಾರೆ. ಆಶಾ, ಅಂಗನವಾಡಿ ಮತ್ತು ಬಿಸಿ ಊಟ ಕಾರ್ಯಕರ್ತೆಯರಿಗೆ ಕನಿಷ್ಟ ವೇತನವೂ ನೀಡುತ್ತಿಲ್ಲ. ಗಿಗ್ ಮತ್ತು ಪ್ಲಾಟ್ ಪಾರಂ ಕಾರ್ಮಿಕರಿಗೆ ಯಾವುದೇ ಭದ್ರತೆಗಳಿಲ್ಲ. ಬೆಲೆ ಏರಿಕೆ, ಹಣದುಬ್ಬರಗಳಿಂದ ತತ್ತರಿಸುವ ದುಡಿಯುವ ಜನರ ಜೀವನ ಸಂಕಟಮಯವಾಗುತ್ತಿದೆ. ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಕುಟುಂಬ ನಿರ್ವಹಣೆಗೆ ಬೇಕಿರುವ ಕನಿಷ್ಟ ವೇತನ ರೂ. 35,000/-. ಇದನ್ನು ನಿಗದಿಪಡಿಸುವ ಬಗ್ಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ಜಾರಿಯಾಗಬೇಕಾಗಿದ್ದ ಇಎಸ್ಐ-ಪಿಎಫ್ ಸೌಲಭ್ಯವನ್ನು ಜಾರಿ ಮಾಡದೇ ವಂಚಿಸಲಾಗುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿಯ ನಾಯಕತ್ವದಲ್ಲಿ ಸಂಘಟಿತ-ಅಸಂಘಟಿತ ವಲಯಗಳ ಕಾರ್ಮಿಕರ ಈ ಮೇಲಿನ ಜ್ವಲಂತ ಸಮಸ್ಯೆಗಳ ವಿರುದ್ಧ ರಾಜ್ಯದಾದ್ಯಂತ ನಿರಂತರವಾಗಿ ಚಳುವಳಿಗಳನ್ನು ಬೆಳೆಸುತ್ತಿದೆ. ರಾಜ್ಯದ ಕಾರ್ಮಿಕರು ಎದರಿಸುತ್ತಿರುವ ಸಮಸ್ಯೆಗಳ ಕುರಿತು ಹಲವಾರು ಗೊತ್ತುವಳಿಗಳನ್ನು ಮಂಡಿಸಿ, ಸಮಗ್ರವಾಗಿ ಚರ್ಚಿಸಿ ಮುಂದಿನ ಹೋರಾಟದ ನಿರ್ಣಯಗಳನ್ನು 4ನೇ ರಾಜ್ಯ ಮಟ್ಟದ ಸಮ್ಮೇಳನವು ಕೈಗೊಳ್ಳಲಿದೆ.
ಈ ಸಮ್ಮೇಳನದ ಯಶಸ್ಸಿಗಾಗಿ ಮೈಸೂರಿನ ಹೆಸರಾಂತ ಗಣ್ಯರು, ಪ್ರಗತಿಪರರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ರಾಜ್ಯದ ಸಮಸ್ತ ದುಡಿಯುವ ಜನರು ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿಯು ಕರೆನೀಡುತ್ತದೆ.