ಬಳ್ಳಾರಿ

ಪಿಸಿ, ಪಿಎನ್ಡಿಟಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ: ಜಿಲ್ಲಾಧಿಕಾರಿ

ಪಿಸಿ, ಪಿಎನ್ಡಿಟಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ: ಜಿಲ್ಲಾಧಿಕಾರಿ

ಬಳ್ಳಾರಿ,05: ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಪತ್ತೆ ತಂತ್ರ ವಿಧಾನವನ್ನು ಜಿಲ್ಲೆಯಲ್ಲಿ ಪಿಸಿ ಮತ್ತು ಪಿಎನ್ ಡಿಟಿ ಲಿಂಗ ಆಯ್ಕೆ ನಿಷೇಧ ಕಾಯ್ದೆಯನ್ವಯ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೆ.ಪಿ.ಎಮ್‌.ಇ ನೋಂದಣಿ ಪ್ರಾಧಿಕಾರದ ಸಭೆ ಹಾಗೂ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾಯ್ದೆ ಅಡಿಯಲ್ಲಿ ಬರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ(ಪಿ.ಸಿ.್ಘ ಪಿ.ಎನ್‌.ಡಿ.ಟಿ.) ನಿಷೇಧ ಕಾಯ್ದೆಯನ್ನು ಉಲ್ಲಂಘಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು.ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನ್ ಯಂತ್ರದ ಪ್ರತಿಯೊಂದು ಉಪಕರಣಗಳು ಹಾಗೂ ವ್ಯಕ್ತಿಗಳ ದಾಖಲಾತಿಗಳ ನೋಂದಣಿಯಾಗಿರಬೇಕು. ಸ್ಕ್ಯಾನ್ ಮಾಡಿದವರ ಮಾಹಿತಿಯನ್ನು ತಪ್ಪದೇ ನೋಂದಣಿ ಮಾಡಿಸಿರಬೇಕು. ತಪ್ಪಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ನಮೂದಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಿಲ್ಲೆಯಲ್ಲಿ 122 ಸ್ಕ್ಯಾನಿಂಗ್ ಸೆಂಟರ್ ಗಳಿದ್ದು, 69 ಸೆಂಟರ್ ಗಳು ಕಾರ್ಯ ನಿರ್ವಹಿಸುತ್ತಿವೆ. 24 ಸೆಂಟರ್ ಗಳನ್ನು ಮುಚ್ಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ ಬಾಬು ಅವರು ಸಭೆಗೆ ತಿಳಿಸಿದರು. 

ಪಿ.ಸಿ.ಮತ್ತು ಪಿ.ಎನ್‌.ಡಿ.ಟಿ. ಜಿಲ್ಲಾ ಸಲಹಾ ಸಮಿತಿಯು ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಅನೀರೀಕ್ಷಿತ ಭೇಟಿ ನೀಡಿ ನ್ಯೂನ್ಯತೆಗಳು ಕಂಡು ಬಂದಲ್ಲಿ ನೋಟಿಸ್ ನೀಡಿ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ. ಪಿ.ಸಿ.್ಘ ಪಿ.ಎನ್‌.ಡಿ.ಟಿ. ಕಾಯ್ದೆ ಕುರಿತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು. 

ಕೆಪಿಎಂಇ ಅಡಿ ನೋಂದಣಿಯಾದ ಆಸ್ಪತ್ರೆಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ನೀಡಿ:ಕೆ.ಪಿ.ಎಮ್‌.ಇಯಲ್ಲಿ ನೋಂದಣಿ ಮಾಡಿಕೊಳ್ಳದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಚಿಕಿತ್ಸೆ ನೀಡುವಂತಿಲ್ಲ. ಕಡ್ಡಾಯವಾಗಿ ಅನುಮತಿ ಪಡೆದುಕೊಂಡೇ ಕಾರ್ಯ ನಿರ್ವಹಿಸಬೇಕು, ಈ ಕುರಿತು ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಡಿಹೆಚ್‌ಒ ಅವರಿಗೆ ಸೂಚಿಸಿದರು.ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾರ್ಯಾಚರಣೆ ಹಾಗೂ ದಾಖಲಾತಿ ಪರೀಶೀಲನೆ ಮಾಡುವ ಅಧಿಕಾರವನ್ನು ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳ ಜೊತೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಸಹ ಹೊಂದಿದ್ದು, ಕೆ.ಪಿ.ಎಮ್‌.ಇ ನೋಂದಣಿ ಪ್ರಾಧಿಕಾರದಿಂದ ಕೆ.ಪಿ.ಎಮ್‌.ಇ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಸಂಸ್ಥೆಗಳಿಗೆ ಪ್ರಮಾಣ ಪತ್ರವನ್ನು ಡಿಜಿಟಲ್ ಮುಖಾಂತರ ನೀಡಲಾಗುತ್ತಿದೆ. ಈ ಕುರಿತು ಸಂಬಂಧಿಸಿದವರಿಗೆ ತರಬೇತಿಯನ್ನು ನೀಡಬೇಕು ಎಂದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಪೂರ್ಣಿಮ ಕಟ್ಟಿಮನಿ ಸೇರಿದಂತೆ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ