ಗ್ರಾಮೀಣ ಶಾಲಾ ಮಕ್ಕಳಿಗೆ ಏಕಸ್ ಫೌಂಡೇಶನ್‌ನಿಂದ ನೋಟ್‌ಬುಕ್ ವಿತರಣೆ
ಬೆಳಗಾವಿ, ಸೆ.21: ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ಶಾಲಾ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಏಕಸ್ ಫೌಂಡೇಶನ್ ವತಿಯಿಂದ ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 1.3 ಲಕ್ಷ ನೋಟ್‌ಬುಕ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಏಕಸ್ ಸಮೂಹದ ಕಾರ್ೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಂಗವಾದ ಏಕಸ್ ಫೌಂಡೇಶನ್‌ನ ವಾರ್ಷಿಕ ನೋಟ್‌ಬುಕ್ ಅಭಿಯಾನಕ್ಕೆ ಸಂಸ್ಥೆಯ ಉದ್ಯೋಗಿಗಳು ಹಾಗೂ ಶಾಲಾ ಆಡಳಿತ ಮಂಡಳಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಈವರೆಗೆ ಸುಮಾರು 114 ಸರ್ಕಾರಿ ಶಾಲೆಗಳನ್ನು ತಲುಪಿರುವ ಅಭಿಯಾನವು 19 ಸಾವಿರಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿದೆ.
ಅಭಿಯಾನದಲ್ಲಿ ಸಂಸ್ಥೆಯ 876 ಉದ್ಯೋಗಿಗಳು ಸ್ವಯಂಸೇವಕರಾಗಿ ಭಾಗವಹಿಸಿ, ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿದ್ದಾರೆ. ಏಕಸ್ ಫೌಂಡೇಶನ್ ಅಧ್ಯಕ್ಷೆ ಅಕ್ಕಮಹಾದೇವಿ ಮೆಳ್ಳಿಗೇರಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಹಾಗೂ ಸಮಗ್ರ ಸಮುದಾಯ ಅಭಿವೃದ್ಧಿಗೆ ಸಂಸ್ಥೆಯ ಸಾಮಾಜಿಕ ಬದ್ಧತೆಗೆ ಈ ಅಭಿಯಾನ ಸಾಕ್ಷಿಯಾಗಿದೆ. ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಜತೆಗೆ ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಸುವ ಉದ್ದೇಶವನ್ನು ಅಭಿಯಾನ ಹೊಂದಿದೆ ಎಂದು ಹೇಳಿದರು.
ಅಭಿಯಾನವು ಉದ್ಯೋಗಿಗಳ ಪಾಲಿಗೂ ಭಾವನಾತ್ಮಕವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ಸ್ಫೂರ್ತಿ ನೀಡುವ ಸಂದೇಶವನ್ನು ನೋಟ್‌ಬುಕ್‌ನ ಕೊನೆಯ ಪುಟದಲ್ಲಿ ಉದ್ಯೋಗಿಗಳು ಕೈಬರಹದಲ್ಲಿ ಬರೆದಿದ್ದಾರೆ.
ಇದೇ ವೇಳೆ, ಸಂಸ್ಥೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಉದ್ಯೋಗಿಗಳ ಮಕ್ಕಳ ಕಲಾಕೃತಿಗಳನ್ನು ನೋಟ್‌ಬುಕ್‌ಗಳ ಮುಖಪುಟ ವಿನ್ಯಾಸಕ್ಕೆ ಬಳಸಲಾಗಿದೆ. ಇದರಿಂದ ನೋಟ್‌ಬುಕ್‌ಗಳು ಶಿಕ್ಷಣದ ಜತೆಗೆ ಏಕಸ್ ಕುಟುಂಬದ ಒಗ್ಗಟ್ಟು, ಸೃಜನಶೀಲತೆ ಮತ್ತು ಬಾಂಧವ್ಯದ ಪ್ರತೀಕವಾಗಿವೆ.