ಬಸ್ ಪ್ರಯಾಣದರ ಹೆಚ್ಚಳವಿಲ್ಲ : ಸಚಿವ ಶ್ರೀರಾಮುಲು
ಬಳ್ಳಾರಿ, ಆಗಸ್ಟ್ ೧೪ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ. ರಾಜ್ಯದಲ್ಲಿ ಶೇಕಡ ೬೦ರಿಂದ ೭೦ರಷ್ಟು ಜನರು ಸಾರಿಗೆ ಸಂಸ್ಥೆಯ ಬಸ್ ಪ್ರಯಾಣವನ್ನೇ ಅವಲಂಬಿಸಿದ್ದಾರೆ ಕೋವಿಡ್ ಸಂಕಷ್ಟ, ತೈಲ ಬೆಲೆ, ಬಿಡಿಭಾಗಗಳ ಬೆಲೆ ಏರಿಕೆಯಿಂದ ರಸ್ತೆ ಸಾರಿಗೆ ಸಂಸ್ಥೆ ಕಳೆದ ವರ್ಷ ೧ ಸಾವಿರದ ೨೮೮, ಪ್ರಸಕ್ತ ವರ್ಷದ ಜುಲೈ ಅಂತ್ಯದ ವೇಳೆಗೆ ೫೧೦ ಕೋಟಿ ರೂಪಾಯಿ ನಷ್ಟದಲ್ಲಿದೆ. ನಷ್ಟದ ಪ್ರಮಾಣ ಕಡಿಮೆ ಮಾಡಲು ಪರಿಸರ ಸ್ನೇಹಿಯಾಗಿರುವ ೬೦೦ ಎಲೆಕ್ಟ್ರಿಕ್ ಬಸ್ಗಳ ಖರೀದಿಸಲು ಪ್ರಕ್ರಿಯೆ ನಡೆದಿದೆ ಎಂದುಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಪ್ರಾದೇಶಿಕ ಸಾರಿಗೆ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಷ್ಟದಲ್ಲಿರುವ ಸಾರಿಗೆ ಸಂಸ್ಥೆಯನ್ನು ಆರ್ಥಿಕ ಶಿಸ್ತು ಮೂಡಿಸುವ ಮತ್ತಿತರೆ ಕ್ರಮಗಳ ಮೂಲಕ ಲಾಭದತ್ತ ತರಲು ನಿನ್ನೆ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿರುವೆ. ತೈಲ ಬೆಲೆ ಏರಿಕೆ ನಷ್ಟಕ್ಕೆ ಮುಖ್ಯ ಕಾರಣ ಆಗುತ್ತಿದೆ. ಅದಕ್ಕಾಗಿ ಪರಿಸರ ಮಾಲಿನ್ಯವಿಲ್ಲದ ಎಲೆಕ್ಟ್ರಿಕ್ ಬಸ್ ಗಳನ್ನು ಕೇಂದ್ರ ಸರ್ಕಾರದ ನೆರವಿನಿಂದ ಖರೀದಿಸಿ ಆರಂಭಿಕವಾಗಿ ಬೆಂಗಳೂರು ಮತ್ತು ಸುತ್ತ ಮುತ್ತಲಿನಲ್ಲಿ ಓಡಿಸಲಿದೆಂದು ಹೇಳಿದರು.
ಏರಿಕೆ ಇಲ್ಲ:
ಈಗಲೂ ರಾಜ್ಯದ ಶೇ.೬೦ರಿಂದ ೭೦ರಷ್ಟು ಜನ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣವನ್ನು ಅವಲಂಬಿಸಿದ್ದಾರೆ. ಜನರಿಗೆ ಸಹಕಾರಿಯಾಗುವಂತೆ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಅದಕ್ಕಾಗಿ ಸದ್ಯ ಬಸ್ ಪ್ರಯಾಣದ ಧರ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ರಾಷ್ಟ್ರೀಯ ವಾಹನ ಗುಜರಿ ನೀತಿಯಿಂದ ಹಳೇ ವಾಹನಗಳ ಮಾರಾಟಕ್ಕೆ ವಾಹನ ಮಾಲೀಕರಿಗೆ ಸಹಕಾರಿಯಾಯಿತು. ಇದು ಉತ್ತಮ ಯೋಜನೆ ಎಂದರು.
ಬಳ್ಳಾರಿಯಲ್ಲಿ ಚಾಲನ ತರಬೇತಿ ಕೇಂದ್ರ, ವಾಹನಗಳ ಫಿಟ್ ನೆಸ್ ಪರೀಕ್ಷಾ ಕೇಂದ್ರ, ವಾಹನಗಳ ಸೀಜ್ ಯಾರ್ಡ್ ಸ್ಥಾಪಿಸಲು ಅಗತ್ಯವಾದ ಅನುದಾನ ಮತ್ತು ನಿವೇಶನವನ್ನು ಆದಷ್ಟು ಬೇಗ ಕಲ್ಪಿಸಲಿದೆಂದರು.
ಇದಕ್ಕೂ ಮುನ್ನ ಸಾರಿಗೆ ಇಲಾಖೆಯ ಕಲ್ಬುರ್ಗಿಯ ಜಂಟಿ ಆಯುಕ್ತ ಮಲ್ಲಿಕಾರ್ಜುನ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬದಲಾದ ಕೇಂದ್ರ ಸಾರಿಗೆ ನಿಯಮಗಳಿಂದ ಟೂರಿಸ್ಟ್ ವಾಹನಗಳಿಂದ ತೆರಿಗೆ ಸಂಗ್ರಹ ಕಡಿಮೆಯಾಗಿದೆ.
ಇದರಿಂದ ಚೆಕ್ ಪೋಸ್ಟ್ ಗಳ ಆದಾಯ ಕುಸಿದಿದೆ. ನಿಗಧಿತ ಗುರಿಸಾಧಿಸಲು ಆಗುತ್ತಿಲ್ಲ. ಆದರೆ ಪ್ರಾದೇಶಿಕ ಸಾರಿಗೆ ಕಛೇರಿಗಳಲ್ಲಿ ಕೋವಿಡ್ ನಿಂದ ಕಡಿಮೆ ಯಾಗಿದ್ದರೂ ೫೩೯ ಕೋಟಿ ರೂಗಳ ವಾರ್ಷಿಕ ಗುರಿಗೆ ಈ ವರೆಗೆ ಶೇ.೭೧ರಷ್ಟು ಸಾಧನೆ ಆಗಿದೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣ ಆಗಬೇಕು, ಕಛೇರಿಯ ಪುನರುಜ್ಜೀವನಕ್ಕೆ ೨ ಕೋಟಿ ರೂ ಬೇಕು ಎಂಬ ಬೇಡಿಕೆಗೆ ಸಚಿವರು ಸಮ್ಮತಿ ಸೂಚಿಸಿ ನಿವೇಶನ ಖರೀದಿಗೆ ಹುಡಿಕಿ ಎಂದು ಹೇಳಿದರು
ರಸ್ತೆ ಸುರಕ್ಷತಾ ಕೋಶ
ಈಗ ವಾಹನಗಳ ನೊಂದಣಿ ಸಮಯದಲ್ಲಿ ರಸ್ತೆ ಸುರಕ್ಷತಾ ನಿಧಿ ಸಂಗ್ರಹ ಮಾಡುತ್ತಿದೆ. ಚಾಲನಾ ತರಬೇತಿ ಮೊದಲಾದ ರಸ್ತೆ ಸುರಕ್ಷಿತೆಗಳ ಬಗ್ಗೆ ಜನರಿಗೆ ತರಬೇತಿ ನೀಡಲು ರಸ್ತೆ ಸುರಕ್ಷತಾ ಕೋಶ ಉತ್ತಮ ಕೆಲಸ ಮಾಡಲಿದೆಂದು ವಿವರಿಸಿದರು.
ಮುಖ್ಯವಾಗಿ ಸಾರಿಗೆ ನಿಯಮ ಉಲ್ಲಂಘಿಸಿದ ವಾಹನಗಳನ್ನು ತಂದು ಇಡಲು ಸ್ಥಳಾವಕಾಶ ಇಲ್ಲ, ನಗರದ ಸುತ್ತ ಮುತ್ತ ಸೀಜ್ ಯಾರ್ಡ್ ಅತ್ಯಾವಶ್ಯ ಎಂದು ತಿಳಿಸಿದರು.