ಲೇಖನಗಳು

ತಂದೆ ತಾಯಿಯರನ್ನು ಎಂದೂ ಮರೆಯಬೇಡಿ

ತಂದೆ ತಾಯಿಯರನ್ನು ಎಂದೂ ಮರೆಯಬೇಡಿ

ನಾನು ಇಂದು ಬಸವರಾಜ ಹೊರಟ್ಟಿ ಎಂದು ನಾಡಿಗೆ ಪರಿಚಯವಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅದರ ಹಿಂದಿರುವ ಶಕ್ತಿಯೇ ನನ್ನ ಅವ್ವ. ಅವಳ ತ್ಯಾಗ ಪ್ರೀತಿ ನನಗಾಗಿ ದುಡಿದ ನನ್ನವ್ವನನ್ನು ಹೇಗೆ ಮರೆಯಲು ಸಾಧ್ಯ...! ಹೀಗಾಗಿ ನನ್ನ ಬಳಿ ಯಾರೇ ಬಂದರೂ ಮಾತೃ ಹೃದಯದ ಮೂಲಕವೇ ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತೇನೆ. ಹೀಗಾಗಿ ಶಿಕ್ಷಕರ ಹಾಗೂ ನನ್ನ ಸಂಬಂಧ ತಾಯಿ ಮಕ್ಕಳ ಸಂಬಂಧದಂತೆ ಇದಕ್ಕೆ ಪ್ರೇರಣೆಯೇ ನಮ್ಮವ್ವ.  

ಅವ್ವ ನನ್ನ ಜೊತೆ ಇದ್ದಾಳೆ ಅಂತಾ ಹೇಳಬೇಡಿ, ನಾವೇ ಅವ್ವನ ಜೊತೆ ಇದ್ದೇವೆ ಎನ್ನುವಲ್ಲಿಯ ಹೃದಯ ಸಂಬಂಧ ಬೆಲೆ ಕಟ್ಟಲಾಗದು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಡಹಳ್ಳಿ ಎಂಬ ಪುಟ್ಟ ಗ್ರಾಮದಿಂದ ಬಂದ ನನ್ನನ್ನು ಬೆಳೆಸಿದ ಪರಿ ಎಂದೂ ಮರೆಯಲಾರೆನು. ಅದೇ ನನಗೆ ಇಂದಿಗೂ ಪ್ರೇರಣೆ ಹಾಗೂ ನೆಮ್ಮದಿ. ನಮ್ಮವ್ವನ ಅಂತರಾಳದ ಮಾತುಗಳು ಬಾಲ್ಯದಲ್ಲಿ ನನ್ನನ್ನು ಬೆಳೆಸಿದ ರೀತಿ, ನೀಡಿದ ಸಂಸ್ಕಾರ ಇಲ್ಲಿಯವರೆಗೆ ಬರಲು ಸಾಧ್ಯವಾಗಿದೆ.  

ಸಾವಿರಾರು ಜನಸಂಖ್ಯೆ ಇದ್ದಂತಹ ನನ್ನ ಯಡಹಳ್ಳಿಯಲ್ಲಿ ಎಲ್ಲರಂತೆ ಆಡಿ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಬೆಳೆದವ ನಾನು. ನನ್ನ ತಂದೆ ನನ್ನ ಸಣ್ಣ ವಯಸ್ಸಿನಲ್ಲಿಯೇ ನನ್ನಿಂದ ದೂರವಾದರು. ತಂದೆ ತಾಯಿಯ ಪ್ರೀತಿಯನ್ನು ಒಟ್ಟೊಟ್ಟಿಗೆ ನನ್ನವ್ವ ನನಗೆ ಉಣಬಡಿಸಿ ಹೊಲ ಗೆಲಸ ಮಾಡುವುದರ ಜೊತೆಗೆ ಹಾಲು ಮಾರಿ ನನಗೆ ಹಾಲುಣಿಸಿದವಳು. ನನಗೆ ಶಿಕ್ಷಣ ಕೊಡುವಲ್ಲಿ ಎಂದೂ ಹಿಂದೆ ಬೀಳಲಿಲ್ಲ. ತನಗೆಷ್ಟೇ ನೋವಿದ್ದರೂ ನುಂಗಿ ನನ್ನನ್ನು ನಗಿಸಿದವಳು. ಇಂದಿಗೂ ನಾನು ನಗುನಗುತ್ತಲೇ ನೆಮ್ಮದಿಯಿಂದ ಜೀವಿಸುತ್ತಿದ್ದರೆ ನನ್ನವ್ವನ ಅಂದಿನ ತ್ಯಾಗ ಪ್ರೀತಿ ದುಡಿಮೆಯ ಪ್ರತಿಫಲ.  

ಪ್ರಪಂಚದಲ್ಲಿ ಫಲಾಪೇಕ್ಷೆಯಿಲ್ಲದ, ಸ್ವಾರ್ಥವಿಲ್ಲದ ವಸ್ತು ಯಾವುದಾದರೂ ಇದ್ದರೆ ಅದು “ಅವ್ವ” ಮಹಾಭಾರತದಲ್ಲಿ ಯಕ್ಷ ಪ್ರಶ್ನೆ ಕೇಳುತ್ತಾನೆ. ಭೂಮಿಗಿಂತ ದೊಡ್ಡ ವಸ್ತು ಯಾವುದು? ಅದಕ್ಕೆ ಉತ್ತರ “ತಾಯಿ” ಎಂದು ಧರ್ಮರಾಜ ಹೇಳುತ್ತಾನೆ.  

ಭಗವಂತನನ್ನು ಪೂಜಿಸಿದರೆ ಅವ್ವ ಬರುವುದಿಲ್ಲ. ಆದರೆ ಅವ್ವನನ್ನು ಪೂಜಿಸಿದರೆ ಭಗವಂತನು ಖಂಡಿತ ಬರುತ್ತಾನೆ. ಅನ್ನ ಕೊಟ್ಟ ತಂದೆ, ತುತ್ತು ಕೊಟ್ಟ ತಾಯಿ, ಬದುಕು ಕೊಟ್ಟ ಭಗವಂತ, ವಿದ್ಯೆಕೊಟ್ಟ ಗುರು, ಕನಸು ಕೊಟ್ಟ ಸಂಗಾತಿ ಮರೆತರೆ ಇವರ ಜೀವ ಭೂಮಿಗೆ ಭಾರ.  

“ತಾಯೊಲವೆ, ತಾಯೊಲವು ಈ ಲೋಕದೊಳಗೆ ಕಡಲಿಂಗೆ ಕಡಲಲ್ಲದುಂಟೆ ಹೋಲಿಕೆಗೆ” ಎಂಬ ಡಾ. ಜಿ.ಎಸ್‌.ಶಿವರುದ್ರ​‍್ಪನವರ ಮಾತು ಎಷ್ಟೊಂದು ಅರ್ಥಗರ್ಭಿತ. ಹೆತ್ತವ್ವನಿಗೆ, ಅವ್ವ, ತಾಯಿ, ಜನನಿ, ಅಮ್ಮ, ಮಾತಾ, ಮದರ....... ಹೀಗೆ ಹೆಸರು ನೂರಿರಬಹುದು. ಆದರೆ ಆ ಪದಗಳ ಹಿಂದಿನ ಉಸಿರು ಒಂದೇ-ಅದೇ ಮಮತೆ, ಅದೇ ಪ್ರೀತಿ, ಅದೇ ಅಂತಃಕರಣ, ಅದೇ ಕಕ್ಕುಲಾತಿ, ಜಗತ್ತಿನಾದ್ಯಂತ ಜಾತಿ, ಮತ, ಪಂಥ, ಇತ್ಯಾದಿ ಯಾವುದೇ ಬೇದಭಾವವಿಲ್ಲದೇ ಪೂಜೆಗೊಳ್ಳುವ ಏಕೈಕ ದೇವರು-ತಾಯಿದೇವರು. ದೇವರಷ್ಟೇ ಅಲ್ಲ ಕಾಣದ ದೇವರಿಗಿಂತಲೂ ಕಾಣುವ ಈ ದೇವರು ಇನ್ನೂ ಮಿಗಿಲು. ಅದಕ್ಕೆಂದೆ ಕವಿ ದಿನಕರ ದೇಸಾಯಿ “ತಾಯಿಯು ದೇವರಿಗಿಂತಲೂ ಮೇಲು. ದೇವರ ಮೊಲೆಯಲ್ಲಿ ದೊರಕುವುದೇ ಹಾಲು” ಎಂದು ಮನತಟ್ಟುವಂತೆ ಹೇಳಿದ್ದಾರೆ.  

ಅವ್ವ-ನಮ್ಮ ರಕ್ತ, ಮಾಂಸ, ಬುದ್ಧಿ, ಏನೆಲ್ಲಗಳ ಮೊತ್ತ. ಜಗತ್ತಿನಲ್ಲಿ ಇನ್ನಾವುದೇ ಋಣ ತೀರಿಸಬಹುದು. ತಾಯಿಯ ಋಣದಿಂದ ಮುಕ್ತರಾಗುವುದು ಅಸಾಧ್ಯದ ಮಾತು. ನವಮಾಸ ಗರ್ಭದಿ ಹೊತ್ತು ಅಪಾರ ಯಾತನೆ ಅನುಭವಿಸಿ ಹೆತ್ತು ನಡೆಗಲಿಸಿದ ನುಡಿ ಗಲಿಸಿದ, ಉಡಗಲಿಸಿದ ತಾಯಿಯ ಕಡಲಾಂತಃಕರಣವನ್ನು ಹೃದಯಾರೆ ನೆನೆದು ನಮಿಸಿ ನತಮಸ್ತಕರಾಗಬಹುದೇ ವಿನಃ ಕಣದಷ್ಟು ಋಣ ತೀರಿಸಲಾರೆವು. ಅಂತೆಯೇ ಪ್ರವಾದಿ ಮಹಮ್ಮದ ಪೈಗಂಬರರು “ಸ್ವರ್ಗವೆಲ್ಲಿದೆ” ಎಂಬ ಪ್ರಶ್ನೆಗೆ ‘ತಾಯಿಯ ಪದತಲದಲ್ಲಿ’ ಎಂದು ಉತ್ತರಿಸಿದ್ದು.  

ವಿಶ್ವದ ಎಲ್ಲ ಮಹಾಮಹಿಮರ ಎದೆಗೂಡಲ್ಲಿ ಒಳಿತಿನ ಬೀಜ ಬಿತ್ತಿದ್ದು ತಾಯಿಯೇ. ನಮಗೆ ಗಿಡದ ಮೇಲಿನ ಹೂವು ಹಣ್ಣುಗಳಷ್ಟೇ ಗೋಚರ. ತಾಯಿ ಬೇರು ಅಗೋಚರ. ತಾಯಿಯೆಂದರೆ ಹಾಗೆಯೇ ತಿಲದ ಮರೆಯ ತೈಲದಂತೆ, ಸುಮದ ಮರೆಯ ಗಂಧದಂತೆ-ನಮ್ಮರಿವಿಗೆ ಬಾರದಂತೆಯೇ ನಮ್ಮ ಬದುಕು ತಿದ್ದಿ ತೀಡಿರುತ್ತಾಳೆ.  

ರಾಜಕೀಯ ಸೊಂಕಿಲ್ಲದ ಅವ್ವ ಸೇವಾ ಟ್ರಸ್ಟಿನ ಮೂಲಕ ತಾಯಿಯ ನೆನಪು ಚಿರಸ್ಥಾಯಿ ಯಾಗಿರಬೇಕೆಂಬುದು ನಮ್ಮ ಹೆಬ್ಬಯಕೆ. ತಾಯಿಯ ನೆನಪು ಎಲ್ಲ ಮಕ್ಕಳಿಗೂ ಇರುತ್ತದೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅವ್ವ ಸೇವಾ ಟ್ರಸ್ಟ ಸ್ಥಾಪಿಸಿ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರನ್ನು ಸತ್ಕರಿಸುವುದರೊಂದಿಗೆ ಮಾನಸಿಕ, ಆರ್ಥಿಕ ದೌರ್ಬಲ್ಯ ಹೊಂದಿ ಸಮಾಜದಿಂದ ಕಡೆಗಣಿಸಲ್ಪಡುತ್ತಿರುವ, ಅವಕಾಶ ವಂಚಿತರಾಗುತ್ತಿರುವ ಪ್ರತಿಭಾವಂತರ ಬಾಳಿಗೆ ಹೊಸ ಬೆಳಕು ನೀಡುವ ಘನ ಉದ್ದೇಶದಿಂದ ಸ್ಥಾಪಿತವಾದ ಈ ಸಂಸ್ಥೆ ಕಳೆದ 13 ವರ್ಷಗಳಿಂದ ಸಾರ್ಥಕ ಸೇವೆ ಮಾಡುತ್ತಾ ಬಂದಿದೆ ಎಂಬ ಹೆಮ್ಮೆ ನನಗಿದೆ. ಆ ನಿಟ್ಟಿನಲ್ಲಿ ಇದೇ ಡಿಸೆಂಬರ್ 05 ರಂದು ತೋಂಟದಾರ್ಯ ಮಠದಲ್ಲಿ ಅವ್ವನ ಮಹತ್ವದ ಕುರಿತು ಚಿಂತನ-ಮಂಥನಗೈಯಲು ವಿಶೇಷ ಶಿವಾನುಭವಕ್ಕೆ ಅವ್ವ ಸೇವಾ ಟ್ರಸ್ಟ ಹಾಗೂ ಶ್ರೀಮಠದ ಬಳಗ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾದದ್ದು ‘ಅಮ್ಮ’ನ ಮಮತೆ ಪ್ರೀತಿಯ ಕುರಿತು ಸಾಂಸ್ಕೃತಿಕ ಬೀಜ ಬಿತ್ತಬೇಕಿದೆ. ಈ ಕಾರ್ಯಕ್ರಮ ಇತರರಿಗೆ ಮಾದರಿಯಾಗುವದರ ಜೊತೆಗೆ ಸಮಾಜದಲ್ಲಿ ಸೌಹಾರ್ಧತೆ ಹೆಚ್ಚಿಸುವಲ್ಲಿ ಸಹಾಯವಾಗುತ್ತದೆ. ಈ ಸಂದರ್ಭದಲ್ಲಿ ಹಿರಿಯ ತಾಯಂದಿರಿಗೆ, ಶಿಕ್ಷಕಿಯರಿಗೆ ಗೌರವಿಸಲಾಗುವುದು, ಅಲ್ಲದೇ ಇವರ ಸೇವಾ ಕೈಂಕರ್ಯಕ್ಕೆ ನಾವು ನೀವೆಲ್ಲಾ ಕೈಜೋಡಿಸಿ ಇಂತಹ ಭಾವನಾತ್ಮಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಅವಿಭಕ್ತ ಕುಟುಂಬದ ಆಶಯಗಳನ್ನು ಗಟ್ಟಿಗೊಳಿಸೋಣ ಬನ್ನಿ. 

- ಬಸವರಾಜ ಹೊರಟ್ಟಿ  

ನಿಕಟಪೂರ್ವ ಸಭಾಪತಿ  

ಹಾಗೂ ಮೇಲ್ಮನೆ ಹಿರಿಯ ಸದಸ್ಯ 

- * * * - 


ಸುದ್ದಿ ಓದಿ