ಬನಶಂಕರಿ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ; 9 ದಿನ ಭಕ್ತಿಹಿಸಂಸ್ಕೃತಿಯ ಕಲರವ
ಲೋಕದರ್ಶನ ವರದಿ
ಮಹಾಲಿಂಗಪುರ 05 : ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಅ.11ರಿಂದ 19ರವರೆಗೆ ಒಂಬತ್ತು ದಿನಗಳ ಕಾಲ ಭಕ್ತಿ, ಆಧ್ಯಾತ್ಮಿಕತೆ ಹಾಗೂ ಸಾಂಸ್ಕೃತಿಕ ವೈಭವದಿಂದ ನವರಾತ್ರಿ ಉತ್ಸವ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
ಬನಶಂಕರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘದ ಆಶ್ರಯದಲ್ಲಿ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ಭಕ್ತರಿಗೆ ಆಧ್ಯಾತ್ಮಿಕ ಪ್ರವಚನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ ದೊರೆಯಲಿದೆ ಎಂದು ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಪ್ಪ ಬಾವಿಕಟ್ಟಿ ತಿಳಿಸಿದ್ದಾರೆ.
ಉತ್ಸವದ ಅಂಗವಾಗಿ ಅ.11ರಂದು ಮಹಾಲಿಂಗಪುರದ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಚಾಲನೆ ದೊರೆಯಲಿದೆ. ಅ.12ರಂದು ಜೀ ಕನ್ನಡ ಸರಿಗಮಪ ಖ್ಯಾತಿಯ ರೇವಣಸಿದ್ಧ ಪುಲಾರಿ ಅವರ ತತ್ವಪದ ಗಾಯನ, ಅ.13ರಂದು ಸರಿಗಮಪ ಖ್ಯಾತಿಯ ರಮೇಶ ಲಮಾಣಿ ಅವರ ಗಾಯನ, ಅ.14ರಂದು ಕಲರ್ಸ್ ಕನ್ನಡ ಖ್ಯಾತಿಯ ಮಹಾನ್ಯಾ ಪಾಟೀಲ ಅವರ ಸಂಗೀತ ಸಂಜೆ, ಅ.15ರಂದು ವಿಕೆ ಸ್ಟೈಲ್ ಆ್ಯಂಡ್ ಫಿಟ್ನೆಸ್ ಅಕಾಡೆಮಿಯಿಂದ ನೃತ್ಯ ವೈಭವ, ಅ.16ರಂದು ಹೊಸಪೇಟೆಯ ನಾಟ್ಯನಾದ ಕಲಾ ತಂಡದಿಂದ ಜನಪದ ಗೀತೆಗಳ ಕಾರ್ಯಕ್ರಮ ನಡೆಯಲಿದೆ.