ಚನ್ನಮ್ಮಳ ಧೈರ್ಯ ಯುವಕರಿಗೆ ಆದರ್ಶ: ಷಡಕ್ಷರಯ್ಯ
ಮೂಡಲಗಿ 25: ಕಿತ್ತೂರು ರಾಣಿ ಚನ್ನಮ್ಮಳ ಧೈರ್ಯ ಸ್ಥೈರ್ಯಗಳನ್ನು ಇಂದಿನ ಯುವ ಜನಾಂಗ ಆದರ್ಶವಾಗಿಟ್ಟುಕೊಳ್ಳಬೇಕು. ದೇಶಭಕ್ತಿ, ರಾಷ್ಟ್ರಪ್ರೇಮದಂಥ ಮೌಲ್ಯಗಳನ್ನು ಜಾಗೃತವಾಗಿಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯಬೇಕು. ಈ ಹಿನ್ನೆಲೆಯಲ್ಲಿ ಕಿತ್ತೂರು ಸಂಸ್ಥಾನದ ಚರಿತ್ರೆ ನಮಗೆ ಆದರ್ಶವಾಗಿದೆ ಎಂದು ಖ್ಯಾತ ಪುರಾತತ್ವ ವಿದ್ವಾಂಸ ಡಾ. ರು. ಮ. ಷಡಕ್ಷರಯ್ಯ ಅಭಿಪ್ರಾಯ ಪಟ್ಟರು.
ಬುಧವಾರದಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ “ಕಿತ್ತೂರು ರಾಣಿ ಚನ್ನಮ್ಮ ಸಂಶೋಧನೆ ಮತ್ತು ಇತಿಹಾಸ ಮಂಡಳ : ತಲ್ಲೂರ ರಾಯನಗೌಡರ ಶೋಧಗಳು” ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ತಲ್ಲೂರ ರಾಯನಗೌಡರು ಯುವಕರಿದ್ದಾಗ ಇಂಗ್ಲೆಂಡಿಗೆ ಹೋಗಿ ಕಿತ್ತೂರು ಸಂಸ್ಥಾನದ ದಾಖಲೆಗಳನ್ನು ಹುಡುಕಿ ತರುವ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಚೇರಮನ್ನ ಬಸಗೌಡ ಪಾಟೀಲ ಅವರು ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ಧಿರೋದಾತ್ತ ನಾಯಕರ ಜೀವನ ಚರಿತ್ರೆಗಳನ್ನು ಅರಿತುಕೊಳ್ಳಬೇಕು. ಅವರಂತೆ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪನವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನೆನಪುಗಳನ್ನು ಸ್ಮರಿಸಿಕೊಂಡರು.
ರಾಣಿ ಚನ್ನಮ್ಮ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಎಸ್.ಎಂ, ರಾಣಿ ಚನ್ನಮ್ಮ ಅಧ್ಯಯನಪೀಠದ ಸಂಯೋಜಕಿ ಡಾ. ಶೋಭಾ ನಾಯಕ ಮಾತನಾಡಿದರು.
ಎಸ್.ಎಂ. ಗಂಗಾಧರಯ್ಯ ಮತ್ತು ಶೋಭಾ ನಾಯಕ ಅವರು ಸಂಪಾದಿಸಿದ “ಕಿತ್ತೂರು ಶೋಧವೃಕ್ಷ” ಪುಸ್ತಕ ಲೋಕಾರ್ಪಣೆಗೊಂಡಿತು.
ಎಸ್.ಆರ್.ಇ. ಸಂಸ್ಥೆಯ ನಿರ್ದೇಶಕ ಭೀಮಪ್ಪ ಕಡಾಡಿ, ಬೆಳಗಾವಿ ಸಾಹಿತಿ ಯ.ರು.ಪಾಟೀಲ, ತಲ್ಲೂರ ರಾಯನಗೌಡರ ವಂಶಸ್ಥರು, ಪ್ರಾಧ್ಯಾಪಕರು ಮುಂತಾದವರು ಪಾಲ್ಗೊಂಡಿದ್ದರು.
ಡಾ. ಮೈತ್ರೇಯಣಿ ಗದಿಗೆಪ್ಪಗೌಡರ, ಡಾ. ಸುರೇಶ ಹನಗಂಡಿ, ಪ್ರಕಾಶ ಗಿರಿಮಲ್ಲನವರ, ಯಲ್ಲಪ್ಪ ಕಡಕೋಳ ಅವರು ಪ್ರಬಂಧ ಮಂಡಿಸಿದರು.
ಗೋಕಾಕದ ಬಯಲಾಟ ಕಲಾವಿದ ಈಶ್ವರಚಂದ್ರ ಬೆಟಗೇರಿ “ಕಿತ್ತೂರು ಚನ್ನಮ್ಮ” ಪಾತ್ರದ ಪ್ರಾತ್ಯಕ್ಷತೆ ನೀಡಿದರು.ಡಾ. ಸುರೇಶ ಹನಗಂಡಿ ಸ್ವಾಗತಿಸಿದರು. ಪ್ರೊ. ಶಂಕರ ನಿಂಗನೂರಿ ವಂದಿಸಿದರು. ಡಾ. ಕೆ.ಎಸ್.ಪರವ್ವಗೋಳ ನಿರೂಪಿಸಿದರು.