ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ
ಮುಂಡಗೋಡ 22: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ, ತಾ.ಪಂ., ಶಿಶು ಅಭಿವೃದ್ಧಿ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಬೆಡಸಗಾಂವ ಗ್ರಾ.ಪಂ.ವ್ಯಾಪ್ತಿಯ ಉಮ್ಮಚಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪೋಷಣ ಮಾಸಾಚರಣೆಯ ಉದ್ದೇಶ, ಆಚರಣೆಯ ಮಹತ್ವ, ಮಕ್ಕಳಿಗೆ ಅಗತ್ಯವಿರುವ ಪೋಷಕಾಂಶಗಳ ಸದ್ಬಳಕೆ, ತಾಯಂದಿರ ಕರ್ತವ್ಯ, ಬಾಲ್ಯ ವಿವಾಹ ನಿಷೇಧ, ಪೋಸ್ಕೋ ಕಾಯ್ದೆ ಹಾಗೂ ಮಮತೆಯ ತೊಟ್ಟಿಲಿನ ಕುರಿತು ವಲಯ ಮೇಲ್ವಿಚಾರಕಿ ರೂಪಾ ಅಂಗಡಿ ಮಾಹಿತಿ ನೀಡಿದರು. ಶಾಲಾ ಮಕ್ಕಳು ಒಲೆಯಿಲ್ಲದೆ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಕ್ಕಳು ತಯಾರಿಸಿದ ಆಹಾರವನ್ನು ಪ್ರದರ್ಶಿಸಲಾಯಿತು. ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಮಕ್ಕಳು ಯೋಗಾಸನಗಳನ್ನು ಪ್ರದರ್ಶಿಸಿದರು.
ಗ್ರಾ.ಪಂ.ಸದಸ್ಯೆ ಕೋಮಲಾ ಗೌಡರ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಎಸ್.ಡಿ.ಎಮ್.ಸಿ. ಸದಸ್ಯರು, ಬಾಲವಿಕಾಸ ಸಮಿತಿ ಅಧ್ಯಕ್ಷರು, ಪಾಲಕರು, ಸ್ರ್ತೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರಾದ ಯಮುನಾ ಮತ್ತು ಶಿಲ್ಪಾ ಸ್ವಾಗತಿಸಿದರು. ಮುಖ್ಯ ಶಿಕ್ಷಕ ನಾರಾಯಣ ಶೇರುಗಾರ ನಿರೂಪಿಸಿದರು. ಶಿಕ್ಷಕಿ ಅನುಪಮಾ ಡಿ. ಅವರು ರಚಿಸಿದ ಪೋಷಣ ಅಭಿಯಾನದ ಗೀತೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಹೇಳಿದರು. ಶಿಕ್ಷಕ ಬಿ.ಎಮ್.ಸಂತೋಷ ವಂದಿಸಿದರು.
ಬಾಕ್ಸ್ ಸುದ್ದಿ: ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಪೋಷಕಾಂಶವಿರುವ ಆಹಾರದ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ತಯಾರಿಸಿದ ವಿವಿಧ ತರಕಾರಿ, ದವಸಧಾನ್ಯ, ಮೊಟ್ಟೆ, ಹಣ್ಣು, ಸಿದ್ಧಪಡಿಸಿದ ಆಹಾರ ಪದಾರ್ಥಗಳಿಂದ ಕೂಡಿದ ಚಿತ್ರ ಆಕರ್ಷಿಸಿತು.