ಮಹಲಿಂಗಪುರ

ತಾನು ಹುಟ್ಟಿದ ಆಸ್ಪತ್ರೆಗೆ ಬೆಳಕು ಚೆಲ್ಲಿದ ಆರೋಗ್ಯ ನಿರೀಕ್ಷಕ

ತಾನು ಹುಟ್ಟಿದ ಆಸ್ಪತ್ರೆಗೆ ಬೆಳಕು ಚೆಲ್ಲಿದ ಆರೋಗ್ಯ ನಿರೀಕ್ಷಕ

ಮಹಾಲಿಂಗಪುರ21: ಪಟ್ಟಣದ ಜಾತ್ರೆ ಕೋವಿಡ್ ಮುನ್ನೆಚ್ಚರಿಕೆ ಕಾರಣದಿಂದ ಈ ವರ್ಷವೂ ರದ್ದಾಗಿದೆ. ಆದರೆ ವಾಡಿಕೆಯಂತೆ ಪಟ್ಟಣದಲ್ಲಿರುವ ವ್ಯಾಪಾರಸ್ಥರು, ದೊಡ್ಡ ಅಂಗಡಿಕಾರರು, ಉಪಹಾರ ಗೃಹಗಳು, ಬಾರ್ ಮತ್ತು ರೆಸ್ಟೋರಂಟ್‍ಗಳು ವಿದ್ಯುತ್ ದೀಪದ ಅಲಂಕಾರ ಮಾಡಿ ಆರಾಧ್ಯ ಧೈವದ ಜಾತ್ರೆಗೆ ಸ್ವಾಗತ ಕೋರುವ ಮೂಲಕ ಗ್ರಾಹಕರನ್ನು ಸೆಳೆಯುವುದು ಸಾಮಾನ್ಯ. ಆದರೆ ಪಟ್ಟಣದಿಂದ 1 ಕಿಮೀ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಕೂಡ ಜಾತ್ರೆ ನಿಮಿತ್ತ ಇದೇ ಮೊದಲ ಬಾರಿ ವಿದ್ಯುದ್ದೀಪಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿರುವುದು ವಿಶೇಷ. 

ತಾಲೂಕು ಮತ್ತು ಜಿಲ್ಲೆಯಲ್ಲೇ ಮೊದಲು:

ಆಸ್ಪತ್ರೆಯ ಕಿರಿಯ ಆರೋಗ್ಯ ನೀರೀಕ್ಷಕ ಮಹಾಲಿಂಗ ಗೋಣಿ ತಾನು ಹುಟ್ಟಿ ಬೆಳೆದ ಆಸ್ಪತ್ರೆ ಎಂಬ ಹೆಮ್ಮೆಯಿಂದ ವ್ಯಾಪಕ ವ್ಯಾಕ್ಸೀನ್ ಡ್ರೈವ್ ಮಾಡುವಲ್ಲಿ ಸತತ ಪರಿಶ್ರಮ ವಹಿಸಿ, ಅಭಿಯಾನಕ್ಕೆ ಜೀವ ತುಂಬಿದ್ದರು. ರಬಕವಿ-ಬನಹಟ್ಟಿ ತಾಲೂಕಿನಲ್ಲೇ ಮೊಟ್ಟ ಮೊದಲು ಕಾಲೇಜ್ ಕ್ಯಾಂಪಸ್‍ನಲ್ಲಿ 18 ವರ್ಷ ಮೇಲ್ಪಟ್ಟವರ ವ್ಯಾಕ್ಸಿನ್ ಡ್ರೈವ್ ಆರಂಭಿಸಿ ಗಮನ ಸೆಳೆದಿದ್ದರು. ದಿನಕ್ಕೊಂದು ಬಡಾವಣೆಯಲ್ಲಿ ವ್ಯಾಕ್ಸಿನ್ ಸೆಂಟರ್ ತೆರೆದು ಸಾರ್ವಜನಿಕರಿಗೆ ಸುಲಭಗೊಳಿಸಿದ್ದಾರೆ. ಇಲ್ಲಿಯವರೆಗೆ ಸಾರ್ವಜನಿಕ ಸರಕಾರಿ ಆರೋಗ್ಯ ಸಮುದಾಯ ಕೇಂದ್ರದಿಂದ ಅಂದಾಜು 30 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಇದೀಗ ಬಾಗಲಕೋಟ ಜಿಲ್ಲೆಯಲ್ಲೇ ಮೊದಲ ಬಾರಿ 2 ಮೋಬೈಲ್ ವ್ಯಾಕ್ಸಿನ್ ಸೆಂಟರ್ (ಸಂಚಾರಿ ಲಸಿಕಾ ಕೇಂದ್ರ) ಆರಂಭಿಸಿ ಮನೆ ಮನೆಗೆ ತೆರಳಿ ಅಸಹಾಯಕರಿಗೆ ವ್ಯಾಕ್ಸಿನ್ ನೀಡುತ್ತಿದ್ದಾರೆ.

ಸರಕಾರಿ ಆಸ್ಪತ್ರೆ ಎಂದರೆ ದರಕಾರ ಇಲ್ಲದ ದವಾಖಾನೆ, ಅವ್ಯವಸ್ಥೆಯ ಆಗರ, ಕೊರತೆಗಳ ಕೂಪ ಎಂಬೆಲ್ಲಾ ಆರೋಪಗಳು ಸಾಮಾನ್ಯ. ಆದಾಗ್ಯೂ ಸದರಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯಾಧಿಕಾರಿ, ಅಗತ್ಯ ಸಿಬ್ಬಂದಿ ನೇಮಕವಾಗಿ ಇತ್ತೀಚೆಗೆ ಬದಲಾವಣೆಯ ಬೆಳಕು ಮೂಡಿದೆ. ಸೇವೆಯ ಹೊಳಪು ಕಾಣುತ್ತಿದೆ. ಜೊತೆಗೆ ಇದೇ ಆಸ್ಪತ್ರೆಯಲ್ಲಿ ಹುಟ್ಟಿ ಬೆಳೆದ ಯುವಕ ಮಹಾಲಿಂಗ ಗೋಣಿ ಎಂಬ ಯುವಕ ಇಲ್ಲೇ ಕಿರಿಯ ಆರೋಗ್ಯ ನಿರೀಕ್ಷಕನಾಗಿ ಬಂದು ಸಮರ್ಪಣಾ ಮನೋಭಾವದಿಂದ ಸೇವೆ ಮಾಡುವ ಮೂಲಕ ಆಸ್ಪತ್ರೆಗೆ ಒಂದಿಷ್ಟು ಕಳೆ ತಂದಿದ್ದಾರೆ. ಈಗ ಸ್ವಂತ ಖರ್ಚಿನಲ್ಲಿ ಆಸ್ಪತ್ರೆಯನ್ನು ವಿದ್ಯುದ್ದೀಪಗಳಿಂದ ಸಿಂಗರಿಸಿ ಗಮನ ಸೆಳೆದಿದ್ದಾರೆ. ಸರಕಾರಿ ಆಸ್ಪತ್ರೆ ಹೇಗಿದ್ದರೇನು? ತಮಗೆ ಸಂಬಳ ಬಂದರೆ ಸಾಕು, ಬಾಕಿ ಎಲ್ಲವನ್ನೂ ಸರಕಾರವೇ ಮಾಡಲಿ ಎನ್ನುವ ಸಿಬ್ಬಂದಿಗಳ ಮಧ್ಯೆ ಇವರ ಔದಾರ್ಯ ಗನಾರ್ಹವಾಗಿದೆ. 

 - ಶಿವಲಿಂಗ ಸಿದ್ನಾಳ,

ಉಪನ್ಯಾಸಕ ಮಹಾಲಿಂಗಪುರ

ನನ್ನ ಆಸ್ಪತ್ರೆ ನನಗೆ ಹೆಮ್ಮೆ: 

ಮಹಾಲಿಂಗೇಶ್ವರ ಜಾತ್ರೆ ನಿಮಿತ್ತ ಪಟ್ಟಣದ ಪುರಸಭೆ, ಅಂಗಡಿ, ಹೋಟೆಲ್‍ಗಳಿಗೆ ವಿದ್ಯುದ್ದೀಪ ಅಲಂಕಾರ ಮಾಡಿದ್ದನ್ನು ಕಂಡು ಪ್ರೇರಣೆಯಾಯಿತು. ನನಗೆ ಜನ್ಮ ನೀಡಿದ ಮತ್ತು ನೌಕರಿ ನೀಡಿದ ಆಸ್ಪತ್ರೆಯನ್ನು ಅಲಂಕರಿಸುವ ಮನಸಾಯಿತು. ಆಸ್ಪತ್ರೆಯ ಋಣ ತೀರಿಸಲು ಸ್ವಂತ ಖರ್ಚಿನಲ್ಲಿ ಆಸ್ಪತ್ರೆಯ ಮುಂಭಾಗದ ಗೋಡೆಗಳಿಗೆ ಸಾಲು ವಿದ್ಯುದ್ದೀಪಗಳನ್ನು ಅಳವಡಿಸಿ ಅಲಂಕರಿಸಿದ್ದೇನೆ. ನನ್ನ ಆಸ್ಪತ್ರೆ ನನಗೆ ಹೆಮ್ಮೆ. 

 - ಮಹಾಲಿಂಗ ಗೋಣಿ,

ಕಿರಿಯ ಆರೋಗ್ಯ ನಿರೀಕ್ಷಕ ಸಿಎಚ್‍ಸಿ, ಮಹಾಲಿಂಗಪುರ

ಸುದ್ದಿ ಓದಿ