ಮಹಲಿಂಗಪುರ

‘ಗುರುವಿನ ಋಣ ತೀರಿಸಿದ ಶಿಷ್ಯ’

‘ಗುರುವಿನ ಋಣ ತೀರಿಸಿದ ಶಿಷ್ಯ’

ಮಹಾಲಿಂಗಪುರ: ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು, ಅಂದಾಗ ಮಾತ್ರ ಸಮಾಜಕ್ಕೆ ಹಾಗೂ ದೇಶಕ್ಕೆ ಒಳಿತು ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಹೇಳಿದರು.

ಪಟ್ಟಣದ ಬುದ್ನಿ ಪಿಡಿಯಲ್ಲಿ ರೈತ ಮುಖಂಡ ರಮೇಶ ಗಡದನ್ನವರ ವೃತ್ತ ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಡದನ್ನವರ ಶಿಷ್ಯ ಗಂಗಾಧರ ಮೇಟಿ ತನ್ನ ಗುರುವಿನ ಹೆಸರಿನಲ್ಲಿ ವೃತ್ತ ನಿರ್ಮಿಸುವ ಸಲುವಾಗಿ ಜಾಗ ಖರೀದಿಸಿ ಗಡದನ್ನವರ ವೃತ್ತವೆಂದು ನಾಮಕರಣ ಮಾಡಿ ಗುರುವಿನ ಋಣ ತೀರಿಸಿದ್ದಾರೆ ಎಂದರು.

ಸೈದಾಪುರ-ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಗೌಡ ಪಾಟೀಲ ಮಾತನಾಡಿ, ಹೋರಾಟದಲ್ಲಿ ಬರುವ ಕμÀ್ಟಗಳನ್ನು ನುಂಗಿ ಹೋರಾಡುವ ಕಿಚ್ಚು, ಸರ್ಕಾರದ ವಿರುದ್ಧ ಚಾಟಿ ಬೀಸುವ ಎದೆಗಾರಿಕೆ ಗಡದನ್ನವರಲ್ಲಿತ್ತು. ಕಾರ್ಖಾನೆ ಮಾಲೀಕರು ಬಕಾಸುರ ಇದ್ದಂತೆ. ಒಂದು ಕಾರ್ಖಾನೆ ಮಾಡಿ ರೈತರ ಬೆಳೆಗೆ ಸರಿಯಾದ ಬೆಲೆ ನೀಡದೆ ಹತ್ತಾರು ಕಾರ್ಖಾನೆ ಒಡೆಯರಾಗುತ್ತಾರೆ. ಸರ್ಕಾರ ಕೂಡ ಅಪ್ರತ್ಯಕ್ಷವಾಗಿ ಮಾಲೀಕರಿಗೆ ಲಾಭ ಮಾಡುತ್ತದೆ. ಸಸಾಲಟ್ಟಿ ಏತ ನೀರಾವರಿಗಾಗಿ ಸತತ 45 ದಿನಗಳ ಹೋರಾಟ ಮಾಡಿದ್ದ ಗಂಗಾಧರ ಮೇಟಿ ಅವರ ಹೋರಾಟದ ಹಿಂದೆ ಗಡದನ್ನವರ ಹಾಕಿಕೊಟ್ಟ ಸನ್ಮಾರ್ಗ ಇದೆ ಎಂದರು.

ವೃತ್ತ ನಿರ್ಮಾಣದ ರೂವಾರಿ ಗಂಗಾಧರ ಮೇಟಿ ಮಾತನಾಡಿ, ತಾವು ಗಡದನ್ನವರ ಅವರ ಶಿಷ್ಯನಾಗಿದ್ದು, ತಮ್ಮಲ್ಲಿ ಹೋರಾಟದ ಚೈತನ್ಯ ತುಂಬಿದ್ದಾರೆ. ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ. ಅವರ ಸ್ಮರಣೆಗಾಗಿ ಎಲ್ಲ ಹೋರಾಟಗಾರರಿಗೆ ಅವರಿಂದ ಪ್ರೇರಣೆ ಆಗಲಿ ಎಂಬ ಇಚ್ಛೆಯಿಂದ ಗುರುವಿನ ಹೆಸರಿನ ವೃತ್ತ ನಾಮಕರಣ ಮಾಡಿದ್ದೇನೆ. ಮುಂದೆ ಕಂಚಿನ ಮೂರ್ತಿ ಮಾಡಿಸುವುದಾಗಿ ಹೇಳಿದರು.

ಮುಗಳಖೋಡದ ಚಿನ್ಮಯಾನಂದ ಸ್ವಾಮೀಜಿ, ರೈತಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ಚಿನ್ನಪ್ಪ ಪೂಜೇರಿ, ಜಯಶ್ರೀ ಗುರನ್ನವರ, ರಾಘವೇಂದ್ರ ನಾಯಕ ಮಾತನಾಡಿದರು.

ನಾಗರಾಳದ ಲಕ್ಕಪ್ಪ ಮಹಾರಾಜರು, ಮಲ್ಲಪ್ಪ ಸಿಂಗಾಡಿ, ಬಂದು ಪಕಾಲಿ, ಶ್ರೀಕಾಂತ ಗೂಳನ್ನವರ, ಮಹಾಂತೇಶ ಹಿಟ್ಟಿನಮಠ, ಸಜನಸಾಬ ಪೆಂಡಾರಿ, ಬಕ್ಷಿಸಾಬ ಯಾದವಾಡ, ಎಸ್.ಎಸ್.ಈಶ್ವರಪ್ಪಗೋಳ, ಶಿವಲಿಂಗ ಟಿರಕಿ, ಪಾಪಾ ನಾಲಬಂದ, ಗೊಲೇಶ ಅಮ್ಮಣಗಿ, ಮಹಾಲಿಂಗ ಜಕ್ಕಣ್ಣವರ, ಕ್ಯಾದಾರೆಪ್ಪ ಹುರಕಡ್ಲಿ, ದುಂಡಪ್ಪ ಯರಗಟ್ಟಿ, ಮಲ್ಲಪ್ಪ ಅಂಗಡಿ, ಆನಂದ ಮಾಳಿ, ಕರೆಪ್ಪ ಮೇಟಿ, ಹೊನ್ನಪ್ಪ ಬಿರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಓದಿ