ಮಹಲಿಂಗಪುರ

ಪುರಸಭಾ ಸದಸ್ಯ ಶೇಖರ ಬಸಪ್ಪ ಅಂಗಡಿ ರಾಜೀನಾಮೆ

ಪುರಸಭಾ ಸದಸ್ಯ ಶೇಖರ ಬಸಪ್ಪ ಅಂಗಡಿ ರಾಜೀನಾಮೆ


ಮಹಾಲಿಂಗಪುರ : ಪಟ್ಟಣದ 13ನೇ ವಾರ್ಡ್‌ ಕೆಂಗೇರಿಮಡ್ಡಿ ಬಡಾವಣೆಯ ಪುರಸಭಾ ಸದಸ್ಯ ಶೇಖರ ಬಸಪ್ಪ ಅಂಗಡಿ ಅವರು ಭಾಜಪ ಪಕ್ಷದ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 

 ಭಾನುವಾರ ಸಂಜೆ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ತಾವು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿ ಮಾತನಾಡಿದರು. ಕೆಂಗೇರಿಮಡ್ಡಿ ಕೊಳಚೆ ಪ್ರದೇಶ, ಈ ಭಾಗದಲ್ಲಿ ವಿದ್ಯುತ್ ದೀಪಗಳು, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ. ಭಗೀರಥ ಸರ್ಕಲ್ ದಿಂದ ಮಡ್ಡಿಯ ಸಾಯಿ ಸರ್ಕಲ್‌ವರೆಗೆ ಮತ್ತು ಪೊಲೀಸ್ ಸ್ಟೇಷನ್‌ನಿಂದ ಸಾಯಿ ಸರ್ಕಲ್ ವರೆಗೆ ಕೇವಲ 10ರಿಂದ 12 ಅಡಿ ವಿಸ್ತೀರ್ಣದ ಇಕ್ಕಟ್ಟಾದ ರಸ್ತೆಗಳಿದ್ದು ಆಚೆ ಈಚೆ ಆಳವಾದ ತೆಗ್ಗುಗಳಿವೆ. ಈ ಪ್ರದೇಶದಲ್ಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿವೆ ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. 

ಮಾರ್ಗ ಮಧ್ಯದಲ್ಲಿ ಮೂರು ಸ್ಮಶಾನಗಳಿದ್ದು ರಾತ್ರಿ ಹೊತ್ತು ಕತ್ತಲೆಯಿಂದ ಭಯದ ವಾತಾವರಣ ನಿರ್ಮಾಣವಾಗಿರುತ್ತದೆ. ಹಲವಾರು ಬಾರಿ ಪುಡಿಗಾಸು ಕಳ್ಳರು ಹಾಗೂ ಕಾಮುಕರು ತಮ್ಮ ಪರಾಕ್ರಮ ಮೆರೆದಿದ್ದಾರೆ. ಹೀಗಾಗಿ ಬಡಾವಣೆಯ ಚಿಕ್ಕ ಮಕ್ಕಳು ಹಾಗೂ ಮಹಿಳೆಯರು, ವೃದ್ಧರು ರಾತ್ರಿ 10ರ ನಂತರ ಹೆದರಿ ಬಡಾವಣೆಗೆ ಹೋಗದೆ ಅಲ್ಲಿ ಇಲ್ಲಿ ಕುಳಿತು ಬೆಳಗಿನ ಜಾವ ಮನೆ ತಲುಪಿದ ಅನೇಕ ನಿದರ್ಶನಗಳು ನನಗೆ ಹಾಗೂ ಬಡಾವಣೆಯ ಜನರ ಗಮನಕ್ಕೆ ಬಂದಿವೆ. 

ಈ ಎಲ್ಲ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡು ಬಡಾವಣೆಯ ಜನರ ನೆಮ್ಮದಿಯ ಬದುಕಿಗಾಗಿ ಸಂಪರ್ಕ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಶಾಸಕರಿಂದ ಅನುದಾನ ಕೇಳಲಾಗಿ ಕ್ರಿಯಾಯೋಜನೆಗೂ ಅನುಮತಿಸಿ, ನಂತರ ಏಕಾಏಕಿ ರದ್ದುಪಡಿಸಿ ಈ ವಿಷಯಗಳಿಗಾಗಿ ಸರಿಯಾಗಿ ಸ್ಪಂದಿಸದೆ ನನಗೂ ಮತ್ತು ಬಡಾವಣೆಯ ಜನರ ಬೇಸರಕ್ಕೆ ಶಾಸಕರು ಕಾರಣರಾಗಿದ್ದಾರೆ. 

 ಐದು ಬಾರಿ ಪುರಸಭಾ ಸದಸ್ಯ, ಸ್ಥಾಯಿಸಮಿತಿ ಚೇರ್ಮನ್, ಅಧ್ಯಕ್ಷನಾಗಿ ಪಟ್ಟಣದಲ್ಲಿ ಹಲವಾರು ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ ನನಗೆ ಮಾರ್ಚ್‌ 12ರಂದು ನಡೆದ ಪೂರ್ಣಗೊಂಡ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೂ ನನ್ನನ್ನು ಕಡೆಗಣಿಸಲಾಗಿದೆ, ಈ ಎಲ್ಲ ಕಾರಣಗಳಿಂದ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು. 

ಮಹಾಲಿಂಗ ಶಿವಣಗಿ, ನಾಗಲಿಂಗ ಬಡಿಗೇರ, ಸದಾಶಿವ ಬಡಿಗೇರ, ಡಿ.ಎಸ್‌.ಮಡಿವಾಳ, ಶಿವಾನಂದ ಕಂಪು, ಮಲ್ಲಪ್ಪ ಕಂಪು, ಅಬೂಬಕರ್ ಬೂದಿಹಾಳ, ಎಸ್‌. ಬಿ. ಮೆಣಸಿನಕಾಯಿ ಇತರರು ಇದ್ದರು. 


ಸುದ್ದಿ ಓದಿ