ಅನುದಾನ ದುರ್ಬಳಕೆ, ಲೆಕ್ಕ ಕೊಡುವಲ್ಲಿ ಅಧಿಕಾರಿಗಳು ವಿಫಲ; ಸಿದ್ದು ಸವದಿ ತರಾಟೆ.
ಮಹಾಲಿಂಗಪುರ 18: ಕೇವಲ ಒಬ್ಬ ವೈದ್ಯ ಇರುವ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ ಆದರೆ 31 ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ನುರಿತ ವೈದ್ಯರು, ವಿಶಾಲ ಕಟ್ಟಡ, ಸಕಲ ಸೌಲಭ್ಯಗಳನ್ನೂ ಹೊಂದಿ ರೋಗಿಗಳಿಲ್ಲದೇ ಭಣಗುಡುತ್ತಿರುವುದಕ್ಕೆ ಶಾಸಕ ಸಿದ್ದು ಸವದಿ ಆಸ್ಪತ್ರೆಯ ವೈದ್ಯರಾಧಿಯಾಗಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ಮಂಗಳವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿಣಿ ಸಭೆಯಲ್ಲಿ ಕ್ರಿಯಾಯೋಜನೆ ಇಲ್ಲದೇ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಗಮನಕ್ಕೂ ತಾರದೇ, ಯಾವುದೇ ಠರಾವು ಇಲ್ಲದೇ 9 ಲಕ್ಷ ರೂ.ಗಳನ್ನು ಮನಬಂದಂತೆ ಅನಾವಶ್ಯಕ ಖರ್ಚು ಮಾಡಿದ್ದು ಜಮಾ ಖರ್ಚಿನ ಲೆಕ್ಕ ಕೊಡುವಲ್ಲಿ ಅಧಿಕಾರಿಗಳು ವಿಫಲರಾದರು.
ಕೆಲವೊಂದು ಸಲಕರಣೆಗಳನ್ನ ಕೊಡುವ ದಾನಿಗಳಿದ್ದರೂ ಅವುಗಳನ್ನು ಖರೀದಿಸಿ ಹಣ ಪೋಲು ಮಾಡಿರುವುದು ಕಂಡುಬಂತು. ಅವಶ್ಯಕತೆ ಇದ್ದರೂ ಬಳಕೆ ಮಾಡದೇ ನಿರ್ಲಕ್ಷ್ಯ ತೋರಿ ಕಳೆದ ಸಾಲಿನ ಅನುದಾನದ 1.32 ಲಕ್ಷ ಹಣ ಸರ್ಕಾರಕ್ಕೆ ಮರಳಿಸಿರುವುದು ಹೀಗೆ ಹಲವಾರು ಗಂಭೀರ ಲೋಪಗಳನ್ನು ಸಮರ್ಥಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹೆಣಗಾಡಿದರು.
ಇದರಿಂದ ಅಸಮಾಧಾನಗೊಂಡ ಶಾಸಕರು ಸಮಿತಿ ರಚನೆಯ ಉದ್ದೇಶವೇನು? ಸಮಿತಿಯ ಗಮನಕ್ಕೆ ತಾರದೇ ಈ ರೀತಿ ಮಾಡಿದರೆ ಸಮಿತಿ ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು , ಸಮಿತಿ ಸದಸ್ಯರು ಸಹ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಅಸಹಕಾರ ಮತ್ತು ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆರೋಗ್ಯ ರಕ್ಷಾ ಸಮಿತಿ ಕಡೆಗಣಿಸಿ ಸರ್ಕಾರದ ಅನುದಾನವನ್ನು ಮನ ಬಂದಂತೆ ಬಳಸಿರುವುದು ಹಾಗೂ ಸಾಕಷ್ಟು ಸಿಬ್ಬಂದಿ, ವಿಶಾಲವಾದ ಆಸ್ಪತ್ರೆ, ಸಕಲ ಸೌಕರ್ಯಗಳು ಇದ್ದರೂ ಸಿಬ್ಬಂದಿಯ ನಿರ್ಲಕ್ಷದಿಂದ ಹಳ್ಳಿಯ ಬಡಜನರು ಖಾಸಗಿ ಆಸ್ಪತ್ರೆಗಳತ್ತ ತೆರಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ಧ ಅಸಮಾಧಾನಗೊಂಡ ಶಾಸಕರು ಬಡ ರೋಗಿಗಳಿಗೆ ಉತ್ತಮ ಸೇವೆ ನೀಡಲು ತಾಕೀತು ಮಾಡಿದರು. ಗೊಂದಲ ಗೂಡಾದ ಈ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಒಂದು ವಾರದ ಮಟ್ಟಿಗೆ ಮುಂದೂಡಿ ಪಾರದರ್ಶಕವಾದ ಲೆಕ್ಕಪತ್ರವನ್ನು ಸಿದ್ಧಮಾಡಲು ಪ್ರಥಮ ದರ್ಜೆ ಸಹಾಯಕ ಶಿವಾನಂದ ಮಾಮನಿ ಅವರಿಗೆ ತಿಳಿಸಿದರು.
ಮುಖ್ಯ ವೈದ್ಯಾಧಿಕಾರಿ ಸಂಜಯಕುಮಾರ ತೇಲಿ ಮಾತನಾಡಿ, ನಾನು ಇತ್ತೀಚಿಗೆ ಈ ಆಸ್ಪತ್ರೆಗೆ ಬಂದಿದ್ದೇನೆ. ಈಗ ಸುಮಾರು ಒಂದೂವರೆ ತಿಂಗಳಿಂದ ಸುಸೂತ್ರವಾಗಿ ಹೆರಿಗೆಗಳನ್ನು ಮಾಡಿಸುತ್ತಿದ್ದೇವೆ. ಆದ್ದರಿಂದ ಬಡ ರೋಗಿಗಳು ಉಚಿತವಾಗಿ ದೊರೆಯುವ ಹೆರಿಗೆ ಶಸ್ತ್ರಚಿಕಿತ್ಸೆ ಸೌಲಭ್ಯ ಪಡೆದುಕೊಳ್ಳಲು ತಿಳಿಸಿದರು.
ತಹಶೀಲ್ದಾರ ಸಂಜಯ ಇಂಗಳೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜಯಕುಮಾರ ಹಿಪ್ಪರಗಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಪ್ರಕಾಶ ತಟ್ಟಿಮನಿ, ಮಹೇಶ ಚಿಂಚಲಿ, ಜಗದೀಶ ಜಕ್ಕಣ್ಣವರ, ಆನಂದ ಬೆನಗಿ, ಮಹೇಶ ಕಲಾಲ ಹಾಗೂ ಪುರಸಭಾ ಸದಸ್ಯ ರಾಜು ಚಮಕೇರಿ, ಡಾ.ಸಿ.ಎಂ.ವಜ್ರಮಟ್ಟಿ, ಡಾ. ವಿಶ್ವನಾಥ ಗುಂಡಾ, ಡಾ.ಲಲಿತಾ, ಶಿವಾನಂದ ಅಂಗಡಿ ಇತರರು ಇದ್ದರು.