ಶಾಲೆಯ ನೀರಿಗೆ ಕಿಡಿಗೇಡಿಗಳಿಂದ ಕೀಟನಾಶಕ : 12 ಮಕ್ಕಳು ಆಸ್ಪತ್ರೆಗೆ, ತನಿಖೆಗೆ ತಹಶಿಲ್ದಾರ್ ಸೂಚನೆ
ಬೆಳಗಾವಿ : ಶಾಲಾ ಆವರಣದಲ್ಲಿದ್ದ ಕುಡಿಯುವ ನೀರಿನ ಟ್ಯಾಂಕಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿದ್ದು, ಈ ನೀರು ಸೇವಿಸಿ 12 ಶಾಲಾ ಬಾಲಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತ್ಸರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸವದತ್ತಿ ತಹಶೀಲ್ದಾರ್ ಹೆಗ್ಗನವರ ಸೂಚನೆ ನೀಡಿದ್ದಾರೆ.
ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಈ ಶಾಲೆಯಲ್ಲಿ ಒಟ್ಟು 41 ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ ಈ ಶಾಲೆಯ ಪಕ್ಕದಲ್ಲೇ ಹಲವಾರು ಮನೆಗಳಿವೆ. ಈ ಮನೆಯÀರು ಕೂಡಾ ಈ ಶಾಲೆಯ ಟ್ಯಾಂಕಿನ ನೀರನ್ನೇ ಉಪಯೋಗಿಸುತ್ತಿದ್ದಾರೆ ಎನ್ನಲಾಗಿದೆ. ಶಾಲೆಯ ಆವರಣದಲ್ಲಿರುವ ಟ್ಯಾಂಕಿಗೆ ಅಪರಿಚಿತ ವ್ಯಕ್ತಿಗಳು ಕೀಟನಾಶಕ ಬೆರೆಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಸೋಮವಾರ ಬೆಳಿಗಿನ 6 ಗಂಟೆಯ ಸುಮಾರಿಗೆ ಇದೇ ಟ್ಯಾಂಕಿನ ಮೂಲಕ ನೀರು ಸಂಗ್ರಹ ಮಾಡಲಾಗಿದೆ. ಇದಾದ ಬಳಿಕವಷ್ಟೇ ಇದಕ್ಕೆ ಕೀಟನಾಶಕ ಬೆರಸಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಟ್ಯಾಂಕ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಇದ್ದುದರಿಂದ ವಿಷದ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಈ ಕೀಟನಾಶಕ ಮಿಶ್ರಿತ ನೀರು ಕುಡಿದ ಶಾಲಾ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದ್ದು, ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿಗಳು ಶಾಲೆಗೆ ಆಗಮಿಸಿ ಸೂಕ್ತ ಮುನ್ನಚ್ಚರಿಕೆ ಕ್ರಮ ವಹಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.