ವಂದೇ ಭಾರತ ರೈಲಿನ ಕ್ರಿಡಿಟ್ ಗಾಗಿ ಒಂದೇ ಪಕ್ಷದ ಸಚಿವ, ಸಂಸದರ ಗುದ್ದಾಟ
ಪಾರೇಶ ಭೋಸಲೆ
ಬೆಳಗಾವಿ : ಬೆಂಗಳೂರಿನಿಂದ ಬೆಳಗಾವಿಗೆ ಆರಂಭವಾಗುತ್ತಿರುವ ವಂದೇ ಭಾರತ ರೈಲಿನ ಕ್ರಿಡಿಟ್ ಪಡೆಯಲು ಕೇಂದ್ರ ಸಚಿವ ಹಾಗೂ ಸಂಸದರ ನಡುವೆ ಗುದ್ದಾಟ ಪ್ರಾರಂಭವಾಗಿದ್ದು, ಕಾರ್ಯ ಒಬ್ಬರದ್ದು ಆದರೆ ಕೀರ್ತಿ ಇಬ್ಬರು ಪಡೆಯಲು ಹವನಿಸುತ್ತಿರುವದನ್ನು ನೋಡಿ ಬೆಳಗಾವಿ ಜನರು ನಗೆಪಾಟಿಲಿಗೆ ಈಡಾಗಿದ್ದಾರೆ. ಆದರೆ ವಿಪರ್ಯಾಸವೆಂದರೆ ಇವರೆಲ್ಲರೂ ಒಂದೇ ಪಕ್ಷದವರಾಗಿದ್ದು, ಇವರ ಈ ರಾಜಕೀಯ ಮೇಲಾಟಕ್ಕೆ ಬೆಳಗಾವಿ ಜನರು ಹೈರಾಣಾಗಿದ್ದಾರೆ.
ಕರ್ನಾಟಕದ ಎರಡನೇ ರಾಜಧಾನಿ ಆಗಿರುವ ಬೆಳಗಾವಿಗೆ ವಂದೇ ಭಾರತ ರೈಲು ಸಂಚರಿಸಬೇಕು ಎನ್ನುವುದು ಹಲವು ವರ್ಷಗಳ ಕನಸಾಗಿತ್ತು. ಕೊನೆಗೆ ಈ ಕನಸು ಈಡೇರುತ್ತಿದೆ. ಆದರೆ ಶಿಸ್ತಿನ ಪಕ್ಷವಾಗಿರುವ ಬಿಜೆಪಿಯ ಇಬ್ಬರು ಹಿರಿಯ ನಾಯಕರ ರಾಜಕೀಯ ಮೇಲಾಟಕ್ಕೆ ಬೆಳಗಾವಿಯ ಜನರ ಕಣ್ಣು ಕೆಂಪಾಗುವಂತೆ ಮಾಡಿದೆ.
ಬೆಂಗಳೂರಿನಿಂದ ಬೆಳಗಾವಿಗೆ ಇಂದಿನಿಂದ ಆರಂಭವಾಗಲಿರುವ ದೇಶದ ಅತಿ ವೇಗದ ವಂದೇ ಭಾರತ್ ರೈಲನ್ನು ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ಆದರೆ, ಈ ರೈಲು ಪ್ರಾರಂಭವಾಗಲು ನಾನೆ ಕಾರಣ ಎಂದು ಬಿಂಬಿಸಿಕೊಳ್ಳಲ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇವರುಗಳ ನಡುವೆ ನಡೆಯುತ್ತಿರುವ ಗುದ್ದಾಟ ಈಗ ಬೆಳಗಾವಿ ಜನರ ನಗೆ ಪಾಟಲಿಗೆ ಗುರಿಯಾಗಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು -ಹುಬ್ಬಳ್ಳಿಗೆ ಆಗಮಿಸುತ್ತಿದ್ದ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ವಿಸ್ತರಿಸಬೇಕು ಎಂಬ ಹೋರಾಟ ಜೋರಾಗಿ ನಡೆಯುತ್ತಿತ್ತು. ಆದರೆ ಸುರೇಶ ಅಂಗಡಿ ಅವರು ನಿಧನದ ಬಳಿಕ ಸಂಸದರಾಗಿದ್ದ ಮಂಗಲಾ ಅಂಗಡಿ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒಂದೇ ಭಾರತ ರೈಲು ಬೆಳಗಾವಿ ವರೆಗೆ ವಿಸ್ತರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಈ ರೈಲು ಕೆಲ ದಿನಗಳ ವರೆಗೆ ಬೆಳಗಾವಿಗೆ ಬರುತ್ತಿತ್ತು. ಬಳಿಕ ತಾಂತ್ರಿಕ ಕಾರಣದ ನೆಪವೊಡ್ಡಿ ರೈಲನ್ನು ಕೇವಲ ಹುಬ್ಬಳ್ಳಿ- ಧಾರವಾಡಕ್ಕೆ ಮಾತ್ರ ಸೀಮಿತ ಮಾಡಲಾಗಿತ್ತು.
ನಂತರದ ಬೆಳವಣಿಗೆಗಳಲ್ಲಿ ಒಂದೇ ಭಾರತ ರೈಲನ್ನು ಪುನಃ ಬೆಳಗಾವಿಗೆ ಆರಂಭಿಸಬೇಕು ಎಂದು ಬೆಳಗಾವಿಯ ಜನಪ್ರತಿನಿಧಿಗಳು ಒತ್ತಾಯಿಸಿದ್ದರು. ಆದರೆ ಪ್ರಯತ್ನ ವಿಫಲವಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು.
ಕೊನೆಗೂ ಇದಕ್ಕೆ ಸ್ಪಂದಿಸಿದ ಕೇಂದ್ರ ಸರಕಾರ ಬೆಂಗಳೂರು- ಬೆಳಗಾವಿ ನಡುವೆ ವಂದೇ ಭಾರತ್ ರೈಲು ಆರಂಭಿಸುವ ಘೋಷಣೆ ಮಾಡಿತ್ತು. ಇದೀಗ ಇಂದಿನಿಂದ ಬೆಳಗಾವಿ- ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಮಾಡಲಿದೆ.
ಆದರೆ, ಈ ರೈಲು ಆರಂಭಿಸಲು ತಾವೇ ಕಾರಣ ಎಂದು ಬಿಂಬಿಸಿಕೊಳ್ಳಲು ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರುಗಳು ನೀಡಿರುವ ಪತ್ರಿಕಾ ಹೇಳಿಕೆಗಳು ಹಾಸ್ಯಾಸ್ಪದವಾಗಿದೆ ಎಂದು ಬೆಳಗಾವಿ ಜನರು ಮಾತನಾಡುತ್ತಿದ್ದಾರೆ.
ಬೆಳಗಾವಿ-ಬೆಂಗಳೂರು ಸಂಚರಿಸುವ ಈ ರೈಲು ಸಂಚರಿಸುವ ದಿನಾಂಕ ಘೋಷಣೆಯಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಗದೀಶ ಶೆಟ್ಟರ ಅವರು ಈ ರೈಲು ಆರಂಭಕ್ಕೆ ತಾವೇ ಕಾರಣ ಎಂದು ಪೈಪೋಟಿಗೆ ಬಿದ್ದಂತೆ ಪತ್ರಿಕಾ ಹೇಳಿಕೆಗಳನ್ನು ನೀಡಿ ಜನರಿಗೆ ರಂಜನೆ ನೀಡಿದ್ದರು. ಆದರೆ, ಈ ಪ್ರಯತ್ನದ ಹಿಂದೆ ಬೆಳಗಾವಿ ಜಿಲ್ಲೆಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಶಕ್ತಿಮೀರಿ ಪ್ರಯತ್ನಿಸಿದ್ದನ್ನು ಜಿಲ್ಲೆಯ ಜನ ಮರೆಯಲಾರರು.
ಜಗದೀಶ ಶೆಟ್ಟರ ಅವರು ಸಂಸದರಾಗಿ ಒಂದೂವರೆ ವರ್ಷ ಪೂರ್ಣಗೊಂಡಿದೆ. ಆದರೆ, ಈ ಅವಧಿಯಲ್ಲಿ ಅವರಿಂದ ಬೆಳಗಾವಿ ಜಿಲ್ಲೆಗೆ ಹೇಳಿಕೊಳ್ಳುವಂತ ಯಾವುದೇ ಕೆಲಸ ಕಾರ್ಯಗಳಾಗಲಿ ಅಥವಾ ಯೋಜನೆಗಳಾಗಲಿ ಆಗಿಲ್ಲ.
ಇದರಿಂದ ಜಿಲ್ಲೆಯವರನ್ನೇ ಬೆಳಗಾವಿ ಸಂಸದರಾಗಿ ಆಯ್ಕೆ ಮಾಡಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎನ್ನುವ ಬಗ್ಗೆ ಬಿಜೆಪಿ ನಾಯಕರಲ್ಲಿ ಗುಸು ಗುಸು ಮಾತು ಪ್ರಾರಂಭವಾಗಿದೆ.
ಸಚಿವ ಪ್ರಹ್ಲಾದ ಜೋಶಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರ ನಡುವೆ ನಡೆಯುತ್ತಿರುವ ಪ್ರತ್ರಿಕಾ ಹೇಳಿಕೆಗಳ ಗುದ್ದಾಟವನ್ನು ನೋಡಿದರೆ ಕಾರ್ಯ ಒಬ್ಬರದ್ದು, ಆದರೆ ಶ್ರೇಯಸ್ಸು ಪಡೆಯಲು ಇನ್ಯಾರ್ಯಾರು ಕಸರತ್ತು ಎನ್ನುವದು ಇಲ್ಲಿ ಬೆಳಗಾವಿಗರು ಗಮನಿಸಬೇಕಾದ ಸಂಗತಿ ಯಾಗಿದೆ.