ಜಿಲ್ಲೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಿ
ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಸೂಚನೆ | ವಿಜಯನಗರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳ ಕಾರ್ಯನಿರ್ವಹಣೆ ಕುರಿತು ಸಭೆ
ಬಳ್ಳಾರಿ 02:ವಿಜಯನಗರ ಜಿಲ್ಲೆ ಹೊಸದಾಗಿ ಆಸ್ತಿತ್ವಕ್ಕೆ ಬಂದಿದ್ದು, ಈ ಜಿಲ್ಲೆಗೆ ಮೂಲಸೌಕರ್ಯಗಳ ಕಲ್ಪಿಸುವಿಕೆ,ಇಲಾಖೆಗಳ ಆಸ್ತಿ ಹಂಚುವಿಕೆ ಮತ್ತು ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ ಸೇರಿದಂತೆ ಸಮಗ್ರವಾಗಿ ವಿಜಯನಗರ ಜಿಲ್ಲೆ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿಕೆಗೆ ಅಗತ್ಯ ಮಾಹಿತಿ ನೀಡಿ ಎಂದು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ನೇಮಕಗೊಂಡಿರುವ ಅನಿರುದ್ಧ ಶ್ರವಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯನಗರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಕಚೇರಿಗಳ ಕಾರ್ಯನಿರ್ವಹಣೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಯಲ್ಲಿ ಈಗಾಗಲೇ ಕೆಲಸ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ;ಅವುಗಳ ಸಮಸ್ಯೆ ಇಲ್ಲ. ಆದ್ರೇ ಹೊಸದಾಗಿ ಕಚೇರಿಗಳು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ನಮೂನೆಗಳನ್ನು ಸಿದ್ದಪಡಿಸಲಾಗಿದ್ದು,ಅವುಗಳಲ್ಲಿ ಸಂಪೂರ್ಣ ಮಾಹಿತಿ ನೀಡಿ ಭರ್ತಿ ಮಾಡಿ ನೀಡುವಂತೆ ಅವರು ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ತಮ್ಮ ತಮ್ಮ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ ಮತ್ತು ನೂತನ ಜಿಲ್ಲೆಗೆ ಎಷ್ಟು ಜನ ಸಿಬ್ಬಂದಿಗಳನ್ನು ನಿಯೋಜಿಸುತ್ತಿದ್ದೀರಿ, ನೂತನ ಜಿಲ್ಲೆಯಲ್ಲಿ ಇಲಾಖೆಯ ಜಿಲ್ಲಾ ಕಚೇರಿ ತಾತ್ಕಾಲಿಕವಾಗಿ ಆರಂಭಿಸುವುದಕ್ಕೆ ನಿಗದಿಮಾಡಿರುವ ಸ್ಥಳ ಯಾವುದು ಮತ್ತು ಮತ್ತು ಹೊಸಪೇಟೆಯಲ್ಲಿಯೇ ಇರುವ ತಮ್ಮ ತಮ್ಮ ತಾಲೂಕು ಕಚೇರಿಯನ್ನೇ ವಿಸ್ತರಣೆ ಮಾಡುವಿರಾ..?, ನೂತನ ಜಿಲ್ಲೆಯಲ್ಲಿರುವ ತಮ್ಮ ತಮ್ಮ ಇಲಾಖೆಗಳಲ್ಲಿರುವ ಆಸ್ತಿಗಳ ಪ್ರಮಾಣ(ಚರ ಮತ್ತು ಸ್ಥಿರಾಸ್ತಿ ಸೇರಿದಂತೆ), ತಮ್ಮ ಇಲಾಖೆಗಳ ವ್ಯಾಪ್ತಿಯ ಮರುಹಂಚಿಕೆಗಳ ವಿವರ ಹಾಗೂ ಇತರೇ ವಿವರಗಳನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಿದರು.
ಈ ಎಲ್ಲ ವಿವರಗಳನ್ನು ಪಡೆದುಕೊಂಡು ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಿ ನೋಟಿಫಿಕೇಶನ್ ಹೊರಡಿಸಲಾಗುವುದು ಎಂದರು.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಅಗತ್ಯ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಡಿಸಿ ಕಚೇರಿಯಲ್ಲಿ ಪ್ರತ್ಯೇಕ ನಿಯಂತ್ರಣ ಕೋಶ ಸ್ಥಾಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾಮಟ್ಟದ ಕಚೇರಿಗಳು ತತ್ಕ್ಷಣ ಕಾರ್ಯನಿರ್ವಹಿಸುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಳಿದಿರುವ ಅನುದಾನ ಬಳಸಿಕೊಂಡು ಇದೇ ಅರ್ಥಿಕ ವರ್ಷದೊಳಗೆ ಹೊಸಪೇಟೆಯ ತಾಲೂಕು ಕಚೇರಿಗಳನ್ನು ಅಪ್ಗ್ರೇಡ್ ಮಾಡಿ ಎಂದರು. ಬಳ್ಳಾರಿಯಲ್ಲಿ ಜಿಲ್ಲಾಮಟ್ಟದ ಕಚೇರಿಗಳು ಹೊಸದಾಗಿ ಆರಂಭಿಸುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಅವರು ತಿಳಿಸಿದರು.
*ವಿಜಯನಗರ ಜಿಲ್ಲೆ ಹೆಸರು ನಮೂದಿಸಿ: ವಿಜಯನಗರ ಜಿಲ್ಲೆಗಳಲ್ಲಿರುವ 6 ತಾಲೂಕುಗಳಲ್ಲಿ ಸರಕಾರಿ ಸಂಬಂಧಿಸಿದ ಯಾವುದೇ ರೀತಿಯ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಹಾಗೂ ಸರಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ವಿಜಯನಗರ ಜಿಲ್ಲೆ ಅಂತ ಹೆಸರನ್ನು ನಮೂದಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮತ್ತು ವಿಜಯನಗರ ಜಿಲ್ಲೆ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಅವರು ಹೇಳಿದರು.
ವಿಜಯನಗರ ಜಿಲ್ಲೆ ಅಂತ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು;ಇಲ್ಲದಿದ್ದರೇ ಆ ಭಾಗದ ಜನರು ಈಗಾಗಲೇ ಜಿಲ್ಲೆ ಅಂತ ಘೋಷಣೆಯಾಗಿದೆ;ಆದರೂ ಸಹ ಅಧಿಕಾರಿಗಳು ವಿಜಯನಗರ ಜಿಲ್ಲೆ ಹೆಸರು ನಮೂದಿಸುತ್ತಿಲ್ಲ ಅಂತ ಅಂದುಕೊಳ್ಳುತ್ತಾರೆ ಎಂದರು.
ಈಗಾಗಲೇ ಫೆ.8ರಿಂದ ವಿಜಯನಗರ ಜಿಲ್ಲೆಗೂ ಬಳ್ಳಾರಿ ಜಿಲ್ಲಾಧಿಕಾರಿಗಳೇ ಪ್ರಭಾರಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು,ಅದರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು. ಆ ಭಾಗದ ಸರಕಾರಿ ಕಡತಗಳಲ್ಲಿಯೂ ಕಡ್ಡಾಯವಾಗಿ ವಿಜಯನಗರ ಜಿಲ್ಲೆ ಅಂತ ನಮೂದು ಮಾಡಬೇಕು ಎಂದು ಸೂಚಿಸಿದರು.
*ಕಚೇರಿಗಳ ಕಾರ್ಯಾರಂಭಕ್ಕೆ ದೊಡ್ಡ ದೊಡ್ಡ ಕಾಂಪ್ಲೆಕ್ಸ್ಗಳನ್ನು ಗುರುತಿಸಿ: ಜಿಲ್ಲಾಮಮಟ್ಟದ ಕಚೇರಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಹೊಸಪೇಟೆಯಲ್ಲಿ ದೊಡ್ಡ ದೊಡ್ಡ ಕಾಂಪ್ಲೆಕ್ಸ್ಗಳನ್ನು ಗುರುತಿಸಿ ವರದಿ ನೀಡುವಂತೆ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರಿಗೆ ಸೂಚಿಸಿದರು.
ದೊಡ್ಡ ದೊಡ್ಡ ಕಾಂಪ್ಲೆಕ್ಸ್ಗಳನ್ನು ಗುರುತಿಸುವುದರಿಂದ ಒಂದೇಡೆ ಬಹಳಷ್ಟು ಕಚೇರಿಗಳು ಆರಂಭಿಸಲು ಅನುಕೂಲವಾಗುತ್ತದೆ ಎಂದು ಹೇಳಿದ ಅವರು ವಿವಿಧ ಇಲಾಖೆಗಳು ಸ್ಥಾಪಿಸಲಾಗಿರುವ ಸಮುದಾಯ ಭವನಗಳಲ್ಲಿಯೂ ಕಚೇರಿಗಳನ್ನು ಪ್ರಾರಂಭಿಸಬಹುದಾಗಿದೆ; ಸಮುದಾಯಭವನಗಳನ್ನು ಗುರುತಿಸಿ ವರದಿ ನೀಡಿ ಎಂದು ಅವರು ಸೂಚಿಸಿದರು.
ಇದರ ಜೊತೆಗೆ ತಮ್ಮ ತಮ್ಮ ಇಲಾಖೆಗಳ ಕಚೇರಿಯು ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಇನ್ನೀತರ ಮಾಹಿತಿಗಳು ಅಗತ್ಯವಿದ್ದಲ್ಲಿ ಅದರ ಮಾಹಿತಿಯೂ ತಾವು ನೀಡಬಹುದಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಡಿಎಫ್ಒ ಸಿದ್ದರಾಮೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.