ಎಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಸಭೆ
ಇಂಡಿ 17: ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಪ್ರತಿ ವಿದ್ಯಾರ್ಥಿಗೆ ಕನ್ನಡ, ಇಂಗ್ಲೀಷ, ಹಿಂದಿ ಸ್ಪಷ್ಟವಾಗಿ ಓದಲು ಹಾಗೂ ಶುದ್ಧವಾಗಿ ಬರೆಯಲು ಬರಬೇಕು ಹಾಗೂ ಗಣಿತದ ಮೂಲ ಪ್ರಕ್ರಿಯೆಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕರಗಳು ಬರಲೇಬೇಕು. ಸಿಲೆಬಸ್ ಪೂರ್ಣಗೊಳಸಿವುದು ಅಷ್ಟೇ ಮುಖ್ಯವಲ್ಲ ಮಾಡಿದ ಪಾಠಗಳಲ್ಲಿ ವಿದ್ಯಾರ್ಥಿ ಎಷ್ಟು ತಿಳಿದುಕೊಂಡಿದ್ದಾನೆ ಎಂಬುದು ಮುಖ್ಯ ಎಂದು ವಿಜಯಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಎಸ್.ಪಿ. ಬಾಡಗಂಡಿ ಹೇಳಿದರು.
ಬುಧವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗುರುಭವನದಲ್ಲಿ ಇಂಡಿ ವಲಯದ ಎಲ್ಲಾ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳ ಸಭೆಯಲ್ಲಿ ನೇತೃತ್ವವಹಿಸಿ ಮಾತನಾಡಿದರು.
ಪ್ರತಿ ಶಾಲಾ ಮುಖ್ಯಗುರುಗಳು ಕೋವಿಡ್ ಸಂದರ್ಭದಲ್ಲಿ ಎಲ್ಲಾ ಮುನ್ನೆಚ್ಚರಿಕೆ ವಹಿಸಿ ಶಾಲಾ ಪ್ರಾರಂಭಕ್ಕೆ ಅರ್ಧಗಂಟೆ ಮೊದಲು ಶಾಲೆಗೆ ಹೋಗಬೇಕು. ಎಲ್ಲ ಶಿಕ್ಷಕರೂ ಸರಿಯಾಗಿ ಸಮಯಕ್ಕೆ ಹಾಜರಾಗಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳ ಹಾಜರಾತಿಯ ಹೆಚ್ಚಳದ ಜೊತೆಗೆ ಪರಿಣಾಮಕಾರಿ ಕಲಿಕೆ ಉಂಟು ಮಾಡಬೇಕೆಂದು ಕರೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಂ.ಬಂಡಗರ, ಡೈಟ್ ಉಪನ್ಯಾಸಕ ಎ.ಆರ್ ಮುಜಾವರ, ಜೆ.ಎಸ್ ಸೊಡ್ಡಗಿ ಮಾತನಾಡಿದರು.
ಬಿ.ಆರ್.ಪಿ ಬಿ.ಆಯ್. ಗೊರನಾಳ ನಿರೂಪಿಸಿದರು. ಆಯ್.ಜಿ ಆಳೂರ ವಂದಿಸಿದರು. ಎಸ್.ಎ ಹಿಪ್ಪಳಿ, ಎ.ಜಿ. ಚೌಧರಿ, ಸಿ.ಆರ್.ಪಿಗಳು ಸೇರಿದಂತೆ 115 ಜನ ಮುಖ್ಯ ಗುರುಗಳು ಹಾಜರಿದ್ದರು.