ಇಡಿ ದಾಳಿಯಿಂದ ಸತೀಶ್ ಜಾರಕಿಹೊಳಿ ಮುಕ್ತರಾಗಲಿ: ಅಭಿಮಾನಿಯ ಉರುಳು ಸೇವೆ
ಇಡಿ ದಾಳಿಯಿಂದ ಸತೀಶ್ ಜಾರಕಿಹೊಳಿ ಮುಕ್ತರಾಗಲಿ: ಅಭಿಮಾನಿಯ ಉರುಳು ಸೇವೆ
ಚಿಕ್ಕೋಡಿ 13: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಮನೆ ಮೇಲೆ ನಡೆದ ಜಾರಿ ನಿರ್ದೇಶನಾಲಯದ ದಾಳಿಯಿಂದ ಅವರು ಮುಕ್ತರಾಗಲಿ ಎಂದು ಆಶಿಸಿ ಅಭಿಮಾನಿಯೊಬ್ಬರು ಗ್ರಾಮದೇವತೆ ಲಕ್ಷ್ಮೀದೇವಿ ಹಾಗೂ ದ್ಯಾಮವ್ವ ದೇವಿಗೆ ಉರುಳು ಸೇವೆ ಸಲ್ಲಿಸಿದರು. ಚಿಕ್ಕೋಡಿ ತಾಲೂಕಿನ ಕಾಡಾಪುರ ಗ್ರಾಮದ ಸತೀಶ್ ಜಾರಕಿಹೊಳಿ ಅಭಿಮಾನಿ ಅರ್ಜುನ ಗುರುನಾಥ ಅವರು ದೇವರಿಗೆ ಉರುಳು ಸೇವೆ ಸಲ್ಲಿಸಿ, ಸತೀಶ್ ಜಾರಕಿಹೊಳಿ ಅವರು ಇಡಿ ಪ್ರಕರಣದಿಂದ ಮುಕ್ತರಾಗಬೇಕು ಎಂದು ಪ್ರಾರ್ಥಿಸಿದರು. ಕಾಡಾಪುರ ಗ್ರಾಮದ ಕೆರೆಗೆ ಕಾಲುವೆ ಮೂಲಕ ನೀರು ಹರಿಸುವ ಮೂಲಕ ಗ್ರಾಮದ ನೀರಿನ ಸಮಸ್ಯೆ ನಿವಾರಣೆಗೆ ಸಚಿವ ಸತೀಶ್ ಜಾರಕಿಹೊಳಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಇದರಿಂದ ಗ್ರಾಮಕ್ಕೆ ನಿರಂತರವಾಗಿ ನೀರು ದೊರೆಯುವಂತಾಗಿದೆ. ಸಚಿವರ ಈ ಕಾರ್ಯವನ್ನು ಸ್ಮರಿಸಿದ ಅರ್ಜುನ ಗುರುನಾಥ ಅವರು, ಸಚಿವರು ಇಡಿ ಪ್ರಕರಣದಿಂದ ಮುಕ್ತರಾಗಲಿ ಎಂಬ ಆಶಯದಿಂದ ಶ್ರೀಲಕ್ಷ್ಮೀದೇವಿ ಹಾಗೂ ದ್ಯಾಮವ್ವ ದೇವಿಗೆ ಉರುಳು ಸೇವೆ ಸಲ್ಲಿಸಿದರು.