ಸೆ.29ರಂದು ಹುಬ್ಬಳ್ಳಿಯಲ್ಲಿ ರೈತರ ಬೃಹತ್ ಹೋರಾಟ
ಸಂಬರಗಿ 25: ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು, ರೈತರಿಗೆ ಪ್ರತಿ ಟನ್ ಕಬ್ಬಿಗೆ 6,000 ದರ ನೀಡಬೇಕು ಹಾಗೂ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯಲ್ಲಿ ಬೃಹತ್ ರೈತ ಹೋರಾಟ ನಡೆಸಲಾಗುವುದು ಎಂದು ರೈತ ಸಂಘಟನೆಯ ರಾಜ್ಯಾಧ್ಯಕ್ಷ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಎಚ್ಚರಿಸಿದರು. ಸಂಬರಗಿ ಗ್ರಾಮದಲ್ಲಿ ರೈತ ಸಂಘಟನೆಯ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತ ಸಂಘಟನೆಯ ಹೋರಾಟವನ್ನು ದಾರಿ ತಪ್ಪಿಸಬಾರದು ಎಂದು ಹೇಳಿದರು. ಸೆ.29ರಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಗೆ ಒಂದು ಲಕ್ಷ ರೈತರು ಸೇರಿ, ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ತಿಳಿಸಿದರು.
ಹುಬ್ಬಳ್ಳಿ ಹೋರಾಟಕ್ಕೆ ಈಗಾಗಲೇ ಕರೆ ನೀಡಲಾಗಿದ್ದು, ಸುಮಾರು ಒಂದು ಲಕ್ಷ ರೈತರು ಭಾಗವಹಿಸಲಿದ್ದಾರೆ. ರೈತರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ ಮೂರು ತಿಂಗಳು ಕಳೆದರೂ ಕೇಂದ್ರ ಸಚಿವರು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹೀಗಾಗಿ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು. ಗಡಿ ಪ್ರದೇಶದಲ್ಲಿ ರೈತರಿಗೆ ಸಮಸ್ಯೆಯಾಗಿರುವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಲಿಖಿತ ಉತ್ತರ ನೀಡದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಬ್ಬಿಗೆ ಸೂಕ್ತ ಬೆಲೆ ನೀಡುವುದು ರೈತರ ಹಕ್ಕು. ಕಾರ್ಖಾನೆಗಳು ರೈತರಿಗೆ ಪ್ರತಿ ಟನ್ ಕಬ್ಬಿಗೆ 6,000 ದರ ನೀಡಬೇಕು. ಬೇಡಿಕೆ ಈಡೇರದಿದ್ದರೆ ಕಾರ್ಖಾನೆಗೆ ಬೀಗ ಹಾಕುವ ಹೋರಾಟ ನಡೆಸಲಾಗುವುದು ಎಂದು ಶಶಿಕಾಂತ ಗುರೂಜಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಶಿವಲಿಂಗೇಶ್ವರ ಮಹಾಸ್ವಾಮಿ, ಸುರೇಶ್ ಮಹಾರಾಜ್, ಬಿ.ಎಲ್. ಪಾಟೀಲ, ಬಾಬು ಜಾತಿ, ರಾವಸಾಹೇಬ ಜಗತಾಪ್, ಪ್ರಕಾಶ ಪೂಜಾರಿ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ಪರಸಪ್ಪ ಅಂಗಡಿ, ದಶರಥ ನಾಯಕ, ಪ್ರಭಾಕರ ಪಾಟೀಲ ಸೇರಿದಂತೆ ಅನೇಕರು ಹಾಗೂ ರೈತರು ಉಪಸ್ಥಿತರಿದ್ದರು.