ಸಾಮೂಹಿಕ ವಿವಾಹ ಬಡವರಿಗೆ ವರದಾನ : ಮಂಜುನಾಥ ಘಂಟಿ
ಶಿರಹಟ್ಟಿ 25: ಸಾಮೂಹಿಕ ಕಾರ್ಯ ಹೆಚ್ಚಾದಂತೆಲ್ಲ ಬಡ ಕುಟುಂಬಗಳಿಗೆ ವರದಾನವಾಗುವ ಜೊತೆಗೆ ಸರ್ವರು ಸಮಾನರು ಎಂಬುದನ್ನು ತೋರಿಸುತ್ತದೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಮಂಜುನಾಥ ಘಂಟಿ ಹೇಳಿದರು.
ಭಾನುವಾರ ಸ್ಥಳಿಯ ಕುರಬಗೇರಿ ಓಣಿಯ ಬೀರೇಶ್ವರ ಸೇವಾ ಸಮಿತಿ ಶಿರಹಟ್ಟಿ 17ನೇ ವರ್ಷದ ಸರ್ವಧರ್ಮ ಸಾಮೂಹಿಕ ವಿವಾಹಗಳ ಮಹೋತ್ಸವದಲ್ಲಿ ಮಾತನಾಡಿ, ಒಂದೆ ವೇದಿಕೆಯಲ್ಲಿ ನಡೆಯುವ ಇಂತಹ ವಿವಾಹ ಕಾರ್ಯಕ್ರಮದಲ್ಲಿ ಜಾತಿ, ಮತ, ಪಂಥ ಬೇದವಿಲ್ಲದೆ ಸರ್ವರೂ ಸಮಾನರೆಂಬ ತತ್ವ ಪ್ರತಿಪಾದಿಸುತ್ತದೆ. ಜನರು ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಮೆರಸಲು ಆಡಂಬರ ಪ್ರದರ್ಶಿಸುತ್ತಾ ಅದ್ದೂರಿ ವಿವಾಹ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿ ಪರಿತಪಿಸುತ್ತಿದ್ದಾರೆ. ಇದು ಕೊನೆಯಾಗಬೇಕು, ಸರಳ ಸಾಮೂಹಿಕ ವಿವಾಹಗಳನ್ನು ಮಾಡಿಕೊಳ್ಳುವ ಮೂಲಕ ಬದುಕನ್ನು ಸುಂದರಗೊಳಿಸಬೇಕು. ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ ತಾಳ್ಮೆ ಹೊಂದಾಣಿಕೆಯಿಂದ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು. ವರದಕ್ಷಿಣೆಯಂತಹ ಸಮಸ್ಯೆ ಇನ್ನೂ ಜೀವಂತವಾಗಿದೆ. ಸಾಮೂಹಿಕ ವಿವಾಹಗಳಿಂದ ಬಡವರು ಮತ್ತು ಮಧ್ಯಮ ವರ್ಗದವರು ಸ್ವಲ್ಪ ಮಟ್ಟಿಗಾದರು ನೆಮ್ಮದಿ ಪಡೆಯುವಂತಾಗಿದೆ. ಸರಳ ಸಾಮೂಹಿಕ ವಿವಾಹಗಳು ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸಿಮಿತಗೊಳ್ಳಬಾರದು. ನಗರ ಪ್ರದೇಶಗಳಲ್ಲೂ ಇಂತಹ ಮದುವೆಗಳಾದಾಗ ಅನಗತ್ಯ ಖರ್ಚುಗಳನ್ನು ತಡೆಗಟ್ಟಲು ಸಾದ್ಯವಿದೆ. ಶ್ರೀಮಂತರು, ಬಡವರೆಂಬ ಭೇದವನ್ನು ಬದಿಗೊತ್ತಿ ಸರಳ ರೀತಿಯಲ್ಲಿ ಸಾಮೂಹಿಕ ವಿವಾಹಕ್ಕೆ ಹೆಚ್ಚಿನ ಉತ್ತೆಜನ ನೀಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕುರುಬ ಸಮಾಜದ ತಾಲೂಕಾ ಅಧ್ಯಕ್ಷ ದೇವಪ್ಪ ಬಟ್ಟೂರ, ರಾಮಣ್ಣ ಡಂಬಳ, ಎನ್,ವೈ ಕರಿಗಾರ, ಕರಿಯಪ್ಪ ಕುಳಗೇರಿ, ದೇವಪ್ಪ ಪೂಜಾರ, ರಾಮಣ್ಣ ಕಟ್ಟೆಕಾರ, ಮಂಜಪ್ಪ ಹಮ್ಮಿಗಿ, ಹನಮಂತ ಬಟ್ಟೂರ, ಆನಂದ ಸ್ವಾಮಿ, ಕರಿಯಪ್ಪ ಕಟ್ಟೆಕಾರ, ಇನ್ನೂ ಅನೇಕರು ಇದ್ದರು.